ರಾಷ್ಟ್ರೀಯ ಯುವಜನೋತ್ಸವದ ಲೋಗೋ ಮತ್ತು ಮ್ಯಾಸ್ಕಾಟ್ ಬಿಡುಗಡೆ

ಜನವರಿ 12ರಿಂದ 16ರ ವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಲೋಗೋ ಮತ್ತು ಮ್ಯಾಸ್ಕಾಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿಂದು ಬಿಡುಗಡೆಗೊಳಿಸಿದರು.
ವರ್ಚುವಲ್ ವೇದಿಕೆ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ, ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮತ್ತು ಖ್ಯಾತ ನಟಿ ತಾರಾ ಅನುರಾಧಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ ಆಯೋಜನೆ ಹಾಗೂ ಇದೀಗ ಈ ವರ್ಷ ಯುವಜನ ಉತ್ಸವ ಆಯೋಜನೆಗೆ ಅವಕಾಶ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಹಾಗೂ ಯುವಜನೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ಯುವಜನೋತ್ಸವದ ಸಿದ್ಧತೆಗಳ ಕುರಿತು ಚರ್ಚೆ ನಡೆಯಿತು. ಅಲ್ಲದೇ, ಯುವಜನ ಮೇಳದಲ್ಲಿ ಯುವ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸುವ ಯುವಜನರಿಗೆ ರೈಲ್ವೆ ವಿಶೇಷ ಬೋಗಿ ಅಳವಡಿಸುವ ಕುರಿತು, ರೈಲ್ವೆ ಮಂಡಳಿಯು ಒಪ್ಪಿಗೆ ನೀಡಿತು.
ಯುವಜನೋತ್ಸವದ ಲೋಗೋ ಮತ್ತು ಮ್ಯಾಸ್ಕಟ್ ವಿನ್ಯಾಸವನ್ನು ಸ್ಪರ್ಧೆ ಆಯೋಜಿಸುವ ಮೂಲಕ ರೂಪಿಸಿದ ಕುರಿತು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಒಡಿಶಾದ ಬನ್ಸಿಲಾಲ್ ಕೇತ್ಕಿ ರೂಪಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ೫೦ ಸಾವಿರ ರೂಪಾಯಿಗಳ ಬಹುಮಾನ ದೊರೆಯಲಿದೆ. ಈ ಲೋಗೋ ಭಾರತದ ರಾಷ್ಟ್ರೀಯ ಪುಷ್ಪ ತಾವರೆಯಿಂದ ಪ್ರೇರೇಪಿತವಾಗಿದ್ದು, ರಾಷ್ಟ್ರೀಯತೆ, ನಿಸ್ವಾರ್ಥ ಸೇವೆ ಮತ್ತು ವೈವಿಧ್ಯತೆಯ ನಡುವೆಯೂ ಇರುವ ಏಕತೆ ಹಾಗೂ ಸಹಕಾರವನ್ನು ಪ್ರತಿನಿಧಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ, ವಿದೇಶಾಂಗ ವ್ಯವಹಾರದಲ್ಲಿ ಹಾಗೂ ಸೇನಾಬಲದಲ್ಲಿ ಭಾರತದ ಉನ್ನತಿಯನ್ನು ಬಿಂಬಿಸುವ ಜೊತೆಗೆ, ಜಿ೨೦ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಸಹ ಅಭಿವ್ಯಕ್ತಪಡಿಸುತ್ತದೆ.
ಅಂತೆಯೇ ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ ೫೦ ಸಾವಿರ ರೂ. ಗಳ ಬಹುಮಾನ ದೊರೆಯಲಿದೆ. ಇದು ಆನೆಯ ವಿನ್ಯಾಸವನ್ನು ಹೊಂದಿದ್ದು, ಕರ್ನಾಟದಲ್ಲಿ ಅತಿ ಹೆಚ್ಚಿರುವ ಆನೆಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ, ವಿಶ್ವ ಶಾಂತಿಯ ಜೊತೆಗೆ ಕ್ರೀಡೆ, ಸ್ಟಾರ್ಟಪ್, ನಾವಿನ್ಯತೆ, ಶಿಕ್ಷಣ ಸೇರಿಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಯುವ ಮತ್ತು ಆಧುನಿಕ ಭಾರತವನ್ನು ಬಿಂಬಿಸುತ್ತದೆ.