ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಅರ್ಜಿ ಸಲ್ಲಿಸಿದ ಕನಿಷ್ಠ 7 ದಿನಗಳ ಒಳಗೆ ಭೂ ಪರಿವರ್ತನೆ ಅವಕಾಶ
ಚಿಕ್ಕಬಳ್ಳಾಪುರ : ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸುವ ಸಲುವಾಗಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ವ್ಯಾಪಕ ಜನ ಮನ್ನಣೆಯನ್ನು ಗಳಿಸಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾಡಳಿತದಿಂದ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಂದಾಯ ಇಲಾಖೆಯ ಸೇವೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಹಲವಾರು ಸುಧಾರಣೆಗಳನ್ನು ತರಲಾಗಿದೆ. ಬ್ರಿಟಿಷರ ಕಾಲದಿಂದ ಮುಂದುವರಿದಿದ್ದ ಹಲವಾರು ಕಾನೂನುಗಳಿಗೆ ಸುಧಾರಣೆ ತಂದು ಜನಸ್ನೇಹಿಯಾಗಿಸಲಾಗಿದೆ. 'ಹಲೋ ಕಂದಾಯ ಸಚಿವರೇ ಯೋಜನೆ' ಮೂಲಕ 72 ಗಂಟೆಯ ಒಳಗೆ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಯನ್ನು ಮಂಜೂರು ಮಾಡುವ ವ್ಯವಸ್ಥೆ ಜಾರಿ ಮಾಡಿದ್ದೇವೆ. ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ರೈತರು ವ್ಯವಸಾಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದ ದಾಖಲೆ ರಹಿತ ಜಮೀನುಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ಭೂ ಕಬಳಿಕೆ ಹಣೆಪಟ್ಟಿಯಿಂದ ರೈತರನ್ನು ಮುಕ್ತಿಗೊಳಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ಕನಿಷ್ಠ 7 ದಿನಗಳ ಒಳಗೆ ಭೂ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಂಡು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
*ಮಿನಿ ವಿಧಾನ ಸೌಧಕ್ಕೆ 15 ಕೋಟಿ*
'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮದ ಅಂಗವಾಗಿ ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಒಂದು ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಈ ಹಣದಲ್ಲಿ ಏನೆಲ್ಲಾ ಕಾಮಗಾರಿಗಳು ಆಗಬೇಕೋ ಆ ಎಲ್ಲಾ ಕಾರ್ಯಗಳಿಗೂ ಈ ಹಳ್ಳಿಯ ಜನರ ಮಧ್ಯೆಯೇ ಇಂದೇ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸಲಾಗುವುದು. ಈ ಕಾರ್ಯಕ್ರಮ ನನಗೆ ಪಾಠಶಾಲೆಯಾಗಿದ್ದು ಜನರ ಭವಣೆಗಳನ್ನು ಹತ್ತಿರದಿಂದ ಆಲಿಸಿ ಪರಿಹರಿಸಲು ನೆರವಾಗಿದ.ನೂತನವಾಗಿ ರಚನೆಯಾಗಿರುವ ಮಂಚೇನಹಳ್ಳಿ ತಾಲ್ಲೂಕು ಆಡಳಿತ ಕೇಂದ್ರವಾದ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 15 ಕೋಟಿ ಅನುದಾನ ನೀಡಲು ಹಾಗೂ ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ 22 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನಗಳನ್ನು ಸದ್ಯದಲ್ಲೆ ವಿತರಿಸಲು ಸ್ಥಳದಲ್ಲಿಯೇ ಮಂಜೂರಾತಿ ನೀಡಿರುವುದಾಗಿ ಕಂದಾಯ ಸಚಿವರು ಘೋಷಿಸಿದರು