ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಜೋರು: ಅಳಿಸಲಾಗದ ಶಾಯಿ, ಅರಗು ತಯಾರಿಗೆ ಆಯೋಗ ಸೂಚನೆ
ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಕಣ ರಂಗೇರಿದೆ. ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಚುನಾವಣೆ ಗೆಲ್ಲಲು ರಣತಂತ್ರಗಳನ್ನು ರೂಪಿಸುತ್ತಿವೆ. ಆದರೆ, ರಾಜ್ಯದಲ್ಲಿ ಚುನಾವಣೆ ಯಾವಾಗ ಎಂಬುದು ಇನ್ನು ಅಧಿಕೃತವಾಗಿಲ್ಲ.
ಹೌದು, ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರಿನಲ್ಲಿ ಅಳಿಸಲಾಗದ ಶಾಯಿ, ಅರಗು ತಯಾರಿಗೆ ಆಯೋಗ ಸೂಚನೆ ನೀಡಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ತಯಾರಿಕೆಗೆ ಆಯೋಗ ಸೂಚನೆ ನೀಡಿದೆಯಂತೆ. ಈ ಶಾಯಿಯನ್ನು ಪಾರದರ್ಶಕ ಮತದಾನಕ್ಕಾಗಿ ಕೈ ಬೆರಳಿಗೆ ಹಾಕಲಾಗುತ್ತದೆ. ಇದರ ಜೊತೆಗೆ 3,90,000 ಅರಗು ಸ್ಟಿಕ್ ತಯಾರಿಕೆಗೂ ಸೂಚನೆ ನೀಡಲಾಗಿದೆ. ಇದನ್ನು ಮತ ಯಂತ್ರಗಳ ಪ್ಯಾಕಿಂಗ್‌ಗೆ ಬೆಳಸುವ ಮೇಣ ಮಾದರಿಯ ಅರಗು ಆಗಿದೆ.
ಶಾಯಿ ಹಾಗೂ ಅರಗು ಎರಡನ್ನು ರೆಡಿ ಇಟ್ಟುಕೊಳ್ಳುವಂತೆ ಚುನಾವಣಾ ಆಯೋಗದಿಂದ ಸೂಚನೆ ಬಂದಿದೆ. 10 ಮಿ.ಲೀ ಹಾಗೂ 5 ಮಿ.ಲೀ ಅಳಿಸಲಾಗದ ಶಾಯಿ ಬಾಟಲ್ ತಯಾರಿಕೆಗೆ ಸೂಚಿಸಲಾಗಿದೆ. 10 ಮಿ.ಲೀ ಬಾಟಲಿನ ಶಾಯಿಯನ್ನು 600 ಜನಕ್ಕೆ ಹಾಕಬಹುದು.
ಐತಿಹಾಸಿಕ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲಿ ಉತ್ಪಾದನೆ ಶುರುವಾಗಿದೆ. ನೇಪಾಳ, ಶ್ರೀಲಂಕಾ ಸೇರಿದಂತೆ ಪ್ರಪಂಚದ ಹಲವು ದೇಶಗಳಿಗೆ ಅಳಿಸಲಾಗದ ಶಾಯಿಯನ್ನು ಮೈಸೂರಿನ ಮೈಲ್ಯಾಕ್ ಕಂಪನಿ ಸರಬರಾಜು ಮಾಡುತ್ತದೆ. ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ದೇಶದ ಎಲ್ಲ ಚುನಾವಣೆಗಳಿಗೂ ಮೈಸೂರಿನಿಂದಲೇ ಶಾಯಿ ಉತ್ಪಾದನೆಯಾಗುತ್ತದೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಲ್ಯಾಕ್ ಕಾರ್ಖಾನೆ ಸ್ಥಾಪನೆಯಾಯಿತು.