ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆ: ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆ: ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ

ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆ ತಿಳಿಸಲು ಉದ್ದೇಶಿತ‌ ಜನಸಂಕಲ್ಪ ಯಾತ್ರೆಗೆ‌ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮತ್ತೊಂದು ಹೆಜ್ಜೆ ಮುಂದಿಟ್ಟು 224 ವಿಧಾನಸಭೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಕುಮಾರ ಕೃಪ ಅತಿಥಿ ಗೃಹದ ಬಳಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು 2023ರ‌ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧಿಸಲೆಂದು ಸರ್ಕಾರದ ಯೋಜನೆಗಳ ವ್ಯಾಪಕ ಪ್ರಚಾರ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವುದು ಈ ರಥಯಾತ್ರೆ ಉದ್ದೇಶವಾಗಿದ್ದು, ಇದರಿಂದ ಕಾರ್ಯಕರ್ತರಲ್ಲೂ ಹುರುಪು ಹೆಚ್ಚಲಿದೆ ಎಂದರು.

ಸಚಿವರಿಗೆ ಸೂಚನೆ
ಸಚಿವರು ಮಾತ್ರವಲ್ಲ, ಎಲ್ಲ ಶಾಸಕರಿಗೂ ಕ್ಷೇತ್ರ ಕಾರ್ಯ ಚಟುವಟಿಕೆಗಳನ್ನು ಖುದ್ದು ಪರಿಶೀಲಿಸಲು, ತಳಹಂತದ‌ ಕಾರ್ಯಕರ್ತರ ಜತೆಗೆ ನಿಕಟ ಸಂಪರ್ಕ ಇರಿಸಿಕೊಳ್ಳಲು ಸೂಚಿಸಿದ್ದು, ಸಚಿವರ ಕಾರ್ಯಕ್ಷಮತೆ ಮೇಲೂ ನಿಗಾವಹಿಸಲಾಗಿದೆ ಎಂದು ಅರುಣ್ ಸಿಂಗ್‌ ಹೇಳಿದರು.

ಜಾರಕಿಹೊಳಿ ವಿರುದ್ಧ ಕ್ರಮವಹಿಸಲಿ
ಹಿಂದು ಸಂಸ್ಕೃತಿ, ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನ ಕಾಂಗ್ರೆಸ್ ಗೆ ಹೊಸದಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸುವೆ.

ರಾಹುಲ್ ಗಾಂಧಿ ಆದಿಯಾಗಿ ಆ ಪಕ್ಷದ ಎಲ್ಲ ನಾಯಕರು ಹಿಂದುಗಳು, ಹಿಂದುಧರ್ಮದ ಬಗ್ಗೆ ಗೌರವವನ್ನು ಬಿಂಬಿಸಿಕೊಳ್ಳುತ್ತಿದ್ದು, ಅದು ನಿಜವಾಗಿದ್ದರೆ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸ್ವಾಗತಾರ್ಹ
ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್-2 ಚಲನಚಿತ್ರದ ಹಾಡು ಅನುಮತಿ ಪಡೆಯದೆ ಬಳಸಿದ್ದಕ್ಕಾಗಿ ಕಾಂಗ್ರೆಸ್ ನ ಟ್ವಿಟರ್ ಹ್ಯಾಂಡ್ಲರ್ ಮೇಲೆ ವಾಣಿಜ್ಯಿಕ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸ್ವಾಗತಾರ್ಹ ಎಂದು ಅರುಣ್ ಸಿಂಗ್ ಪ್ರತಿಕ್ರಿಯಿಸಿದರು.