ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಗಂಟೆಗಟ್ಟಲೆ ಮಾತನಾಡುವ ಕಲೆ ಪ್ರಧಾನಿ ಮೋದಿಯವರಿಂದ ಕಲಿತೆ: ಎಂ.ಕೆ. ಸ್ಟಾಲಿನ್

ಹೊಸದಿಲ್ಲಿ: ಅದಾನಿ ಗ್ರೂಪ್‌ಗೆ ಕೇಂದ್ರ ಸರಕಾರ ಒಲವು ತೋರುತ್ತಿದೆ ಎಂಬ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸದಿರುವುದು ಆಘಾತಕಾರಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ಮಂಗಳವಾರ ಹೇಳಿದ್ದಾರೆ.
ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಗಂಟೆಗಟ್ಟಲೆ ಮಾತನಾಡುವ ಕಲೆಯನ್ನು ಪ್ರಧಾನಿ ಮೋದಿಯವರಿಂದ ಕಲಿತಿದ್ದೇನೆ ಎಂದು ಸ್ಟಾಲಿನ್ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕಳೆದ ವಾರ ಸಂಸತ್ತಿನಲ್ಲಿ ಪ್ರಧಾನಿ ಮಾಡಿದ ಭಾಷಣಗಳನ್ನು ಸ್ಟಾಲಿನ್ ಉಲ್ಲೇಖಿಸಿದರು.
ಅದಾನಿ ಗ್ರೂಪ್ ದೊಡ್ಡ ಪ್ರಮಾಣದ ಕಾರ್ಪೊರೇಟ್ ವಂಚನೆ ಮಾಡಿದೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಕಳೆದ 2 ವಾರಗಳಿಂದ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಸ್ಟಾಲಿನ್ ಮಂಗಳವಾರ ಪುನರುಚ್ಚರಿಸಿದ್ದಾರೆ. ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳು ನೇರವಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರಕಾರಕ್ಕೆ ಸಂಬಂಧಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದರು.
"ಸುಪ್ರೀಂಕೋರ್ಟ್‌ನಲ್ಲಿರುವ ಸಿಜೆಐ( ಭಾರತದ ಮುಖ್ಯ ನ್ಯಾಯಮೂರ್ತಿ) ಪೀಠವು ಕೂಡ ಪ್ರಕರಣವನ್ನು ಗಂಭೀರವಾಗಿ ವಿಚಾರಣೆ ನಡೆಸುತ್ತಿದೆ. ಆದ್ದರಿಂದ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು " ಎಂದು ಸ್ಟಾಲಿನ್ ಹೇಳಿದರು.