ಯಾದಗಿರಿ । 4 ತಿಂಗಳಿಂದ ಸಿಎಚ್‌ಒಗಳಿಗೆ ವೇತನವಿಲ್ಲ

ಯಾದಗಿರಿ: ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳು ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ.ಕೆಲವರಿಗೆ ಸೆಪ್ಟೆಂಬರ್, ಅಕ್ಟೋಬರ್‌ನಿಂದ ವೇತನ ಜಮಾ ಆಗಿಲ್ಲ.
ಜಿಲ್ಲೆಯಲ್ಲಿ 148 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಆರೋಗ್ಯ ಕೇಂದ್ರದ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ನಿರ್ವಹಿಸುತ್ತಿವೆ.
ಜಿಲ್ಲೆಯವರು ಮಾತ್ರವಲ್ಲದೇ ಹೊರ ಜಿಲ್ಲೆಯವರು ಸಿಎಚ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಡಿಗೆ ಪಾವತಿಸದ ಕಾರಣ ಮಾಲೀಕರು ಮನೆ ಬಿಡುವಂತೆ ತಿಳಿಸಿದ್ದಾರೆ. ಇದರಿಂದ ದಿಕ್ಕೆ ತೋಚುತ್ತಿಲ್ಲ ಎಂದು ಸಮುದಾಯ ಆರೋಗ್ಯ ಅಧಿಕಾರಿಗಳ ಅಳಲಾಗಿದೆ.
'ಕಳೆದ ಐದು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ, ನಮ್ಮಿಂದ ಹಲವಾರು ಸೇವೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ವೇತನ ಸೇರಿದಂತೆ ಭತ್ಯೆ ನೀಡುವುದಿಲ್ಲ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ' ಎಂದು ಸಿಎಚ್‌ಒ ಒಬ್ಬರು ಅಳಲು ತೊಡಿಕೊಂಡರು.
'ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಲ್ಲಿ 148 ಸಿಎಚ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. 15 ಅಂಶಗಳನ್ನು ಆರೋಗ್ಯ ಕೇಂದ್ರದಲ್ಲಿ ನಿರ್ವಹಿಸಬೇಕು. ಅದರ ಜೊತೆಗೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಆದರೆ, ವೇತನ ಮಾತ್ರ ಸರಿಯಾಗಿ ನೀಡುತ್ತಿಲ್ಲ' ಎನ್ನುತ್ತಾರೆ ಅವರು.
'ಗರ್ಭಿಣಿಯರ ತಪಾಸಣೆ, ಟಿ.ಬಿ., ಲಸಿಕೆ, ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಸೇರಿ ಪ್ರತಿ ನಿತ್ಯ ಇಲಾಖೆ ನಿಗದಿಪಡಿಸಿದ 15 ಇಂಡಿಕೇಟರ್‌ಗಳನ್ನು ಭರ್ತಿ ಮಾಡಿ ವರದಿ ಸಲ್ಲಿಸಬೇಕು. 15 ಅಂಶಗಳನ್ನು ಸರಿಯಾಗಿ ಮಾಡಿದರೆ ₹8 ಸಾವಿರ ಇನ್ಸೆಂಟಿವ್ ನೀಡಲಾಗುತ್ತಿದೆ. ಶೇ 60ರಿಂದ 70 ಮಾಡಿದರೆ ₹6ರಿಂದ 7 ಸಾವಿರ ನೀಡಲಾಗುತ್ತಿದೆ. ಇದು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲೆ ಅವಲಂಬಿತವಾಗಿರುತ್ತದೆ' ಎಂದು ಮಾಹಿತಿ ನೀಡುತ್ತಾರೆ.