ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಟಿಕೆಟ್ ಖಚಿತವಾಗಿಲ್ಲ- ಲಕ್ಷ್ಮಣ್‌ ಸವದಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಟಿಕೆಟ್ ಖಚಿತವಾಗಿಲ್ಲ- ಲಕ್ಷ್ಮಣ್‌ ಸವದಿ

ದಗ, ಏಪ್ರಿಲ್‌ 1: ಮುಖ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆದಿಯಾಗಿ ಯಾರಿಗೂ ಟಿಕೆಟ್ ಖಚಿತವಾಗಿಲ್ಲ. ಕ್ಷೇತ್ರ ಆಯ್ಕೆ ನಂತರದ ವಿಷಯ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಹೇಳಿದರು.

ಪಕ್ಷದ ಆಂತರಿಕ ಚುನಾವಣೆಯ ಬಳಿಕ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಗಳಿಗೂ ಸಂಘಟನಾತ್ಮಕ ವೀಕ್ಷಕರಾಗಿ ನಾಯಕರು ಬಂದಿದ್ದಾರೆ.

ಗದಗನಲ್ಲಿಯೂ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಪಕ್ಷದ ಪದಾಧಿಕಾರಿಗಳು 3 ಅಭ್ಯರ್ಥಿಗಳ ಆಯ್ಕೆ ಮಾಡುವ ಅವಕಾಶ ಇದೆ. ಯಾರಿಗೆ ಹೆಚ್ಚಿಗೆ ಅಭಿಪ್ರಾಯ ಸಂಗ್ರಗವಾಗಿದೆ ಅವರಿಗೆ ಆದ್ಯತೆ ಕೊಡಲಾಗುವುದು ಎಂದರು.

ಮಾತು ಮುಂದುವರಿಸಿದ ಲಕ್ಷ್ಮಣ್‌ ಸವದಿ, ರಾಜ್ಯ ಕೋರ್ ಕಮೀಟಿ ಎದುರು ಅದನ್ನು ಓಪನ್ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಆಧಾರವಾಗಿಟ್ಟುಕೊಂಡು ಈ ಆಯ್ಕೆ ನಡೆಯಲಿದೆ. ಆಂತರಿಕ ಸರ್ವೆ ಕೂಡ ಬಂದಿದೆ. ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಯುತ್ತದೆ ಎಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಇರೋದಿಲ್ಲವೋ ಅಲ್ಲಿ ಒಂದು ಹೆಸರನ್ನೇ ಶಿಫಾರಸ್ಸು ಮಾಡುತ್ತೇವೆ. ಹೆಚ್ಚಿಗೆ ಇದ್ದರೇ ಚರ್ಚೆ ಮಾಡಿ ಒಂದು ಎರಡು ಮೂರು ಅಭ್ಯರ್ಥಿಗಳ ಹೆಸರು ಕಳುಹಿಸುತ್ತೇವೆ ಎಂದರು.

ನಾನು ಬಂದಿರುವುದು ಗೋಕಾಕ್, ಅಥಣಿ ವಿಷಯ ಮಾತನಾಡುವುದಕ್ಕಾಗಿ ಅಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾಗಿದೆ. ಚರ್ಚೆ ಮಾಡೋದು ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವೆಲ್ಲರೂ ಬದ್ಧ.

75 ವರ್ಷ ಮೀರಿದ ಅಭ್ಯರ್ಥಿಗಳ ಬಗ್ಗೆಯೂ ಯಾವುದೇ ವಿಷಯವನ್ನು ಹೈಕಮಾಂಡ್ ಹೇಳಿಲ್ಲ. ಕರ್ನಾಟಕದಲ್ಲಿ ಯಾವ ಮಾದರಿ ಇರುತ್ತದೆ ಎಂದು ಇನ್ನೂ ಮಾಹಿತಿ ಇಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಮುಖಂಡರು ಕೇಳುತ್ತಿದ್ದಾರೆ. ಆದರೆ, ಅದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದ ಯಾವ ನಾಯಕರದ್ದೂ, ಯಾವ ಕ್ಷೇತ್ರ ಅನ್ನೋದು ನಿರ್ಣಯವಾಗಿಲ್ಲ. ಮುಖ್ಯಮಂತ್ರಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆದಿಯಾಗಿ ಯಾವ ಹಿರಿಯ ನಾಯಕರ ಬಗ್ಗೆಯೂ ನಿರ್ಣಯವಾಗಿಲ್ಲ. 224 ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈಗ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಇನ್ನು ಈ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೊಸ ಪ್ಲಾನ್‌ ಮಾಡಿದ್ದು, ಕ್ಷೇತ್ರದ ಕಾರ್ಯಕರ್ತರೇ ಟಿಕೆಟ್‌ ಆಕಾಂಕ್ಷಿಗಳ ಹೆಸರುಗಳಿಗೆ ಮತ ಹಾಕಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಈ ನೀತಿ ಅನುಸರಿಸುತ್ತಿದೆ. ಇನ್ನು ಈಗಾಗಲೇ ಚುನಾವಣಾ ದಿನಾಂಕ ಘೋಷಣೆ ಆಗಿದ್ದರೂ ಕೂಡ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ.

ಜೆಡಿಎಸ್‌ ಪ್ರಪ್ರಥಮವಾಗಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಭರ್ಜರಿ ಪ್ರಚಾರ ಆರಂಭಿಸಿತ್ತು. ಇದೀಗ ಶನಿವಾರ ಸಂಜೆ ಎರಡನೇ ಪಟ್ಟಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇತ್ತ ಕಾಂಗ್ರೆಸ್‌ ಕೂಡ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಆಮ್‌ ಆದ್ಮಿ ಪಕ್ಷ ಕೂಡ ಎರಡು ಹಂತದಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆಮಾತ್ರ ಈವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೇ ಕಾದು ನೋಡುವ ನೀತಿ ಅನುಸರಿಸುತ್ತಿದೆ.