ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಸಮೀಕ್ಷೆಗಳು ಮುನ್ಸೂಚನೆ ನೀಡಿವೆ ಎಂದ ಡಿ.ಕೆ.ಶಿವಕುಮಾರ್

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಸಮೀಕ್ಷೆಗಳು ಮುನ್ಸೂಚನೆ ನೀಡಿವೆ ಎಂದ ಡಿ.ಕೆ.ಶಿವಕುಮಾರ್

ತುಮಕೂರು: 'ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ. ಹಿಂಜರಿಯಬೇಡಿ... ಅಗ್ನಿಪಥ ಯೋಜನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಮಹಿಳೆಯರು, ರೈತರು, ವಿಶೇಷವಾಗಿ ಯುವಕರನ್ನು ಸಂಘಟಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

ಭಾನುವಾರ ನಡೆದ ಜಿಲ್ಲಾ ಮಟ್ಟದ ನವ ಸಂಕಲ್ಪ ಶಿಬಿರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಮಧು ಮಾದೇಗೌಡ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರೇಕ್ಷ ಹುಕ್ಕೇರಿ ಗೆಲುವು ಸಾಧಿಸಿರುವುದು ಜನರು ಕಾಂಗ್ರೆಸ್ ಪರ ಒಲವು ತೋರಿರುವುದನ್ನು ತೋರಿಸುತ್ತಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ಸಿದ್ಧರಿದ್ದಾರೆ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳ ಕರಡು ಪ್ರತಿಗಳನ್ನು ಡಿಕೆ. ಶಿವಕುಮಾರ್ ಅವರು ಹರಿದು ಹಾಕಿದ್ದರು.

ನಿನ್ನೆ ಈ ವಿಚಾರ ಕುರಿತು ಮಾತನಾಡಿದ ಅವರು, ಆ ಸಮಾರಂಭದಲ್ಲಿ ಯಾವುದೇ ಧಾರ್ಮಿಕ ಮುಖಂಡರು ಇಲ್ಲದಿದ್ದರೆ ಪ್ರತಿಗಳನ್ನು ಸುಟ್ಟುಹಾಕುತ್ತಿದ್ದೆ ಎಂದು ತಿಳಿಸಿದ್ದಾರೆ.

'ಸ್ವಾಮೀಜಿಗಳನ್ನು ಗೌರವಿಸಿ ನಾನು ಪ್ರತಿಗಳನ್ನು ಮಾತ್ರ ಹರಿದು ಹಾಕಿದ್ದೇನೆ. ಇಲ್ಲದಿದ್ದರೆ, ನಾನು ಅವುಗಳನ್ನು ಸುಟ್ಟುಹಾಕುತ್ತಿದ್ದೆ. ಅಂಬೇಡ್ಕರ್, ಕುವೆಂಪು, ನಾರಾಯಣ ಗುರು ಮತ್ತಿತರ ಮಹನೀಯರನ್ನು ಅವಮಾನಿಸುತ್ತಿರುವುದನ್ನು ನೋಡುತ್ತಾ ಸುಮ್ಮನಿರಬೇಕೇ ಎಂದು ಪ್ರಶ್ನಿಸಿದರು.

ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯವು ಚಾರ್ಜ್ ಶೀಟ್ ಸಲ್ಲಿಸಿರುವ ಕುರಿತು ಮಾತನಾಡಿ, ಮೂರು ವರ್ಷಗಳ ಹಿಂದೆ ಆ ಪ್ರಕರಣ ದಾಖಲಾಗಿತ್ತು ಎಂದರು.

2023ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಡಿ ರಾಜಕೀಯ ಮಾಡುತ್ತಿದ್ದು, ಈಗಾಗಲೇ ಚಾರ್ಜ್ ಶೀಟ್ ಪ್ರತಿಯನ್ನು ಕೇಳಲಾಗಿದೆ ಎಂದು ತಿಳಿಸಿದರು.