ಭೈರಿದೇವರಕೊಪ್ಪ ದರ್ಗಾ ತೆರವು ರಾಜಕೀಯ ಪ್ರೇರಿತ - ಶಾಸಕ ಅಬ್ಬಯ್ಯ ಆರೋಪ
ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ರಾಜಕೀಯ ಪ್ರೇರಿತ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆರೋಪಿಸಿದ್ದಾರೆ.ದರ್ಗಾ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಗಾ ತೆರವು ಮಾಡುತ್ತಿರುವುದು ಖಂಡನೀಯ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ, ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತಂದು ಪ್ರಚೋದನೆ ಮಾಡುತ್ತಿದೆ ಎಂದು ಕಿಡಿಕಾರಿದರು.ಪ್ರಸಾದ್ ಅಬ್ಬಯ್ಯ (ಶಾಸಕರು ಹು-ಧಾ ಪೂರ್ವ)ಈ ದರ್ಗಾದಿಂದ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಆಗುತ್ತಿರಲಿಲ್ಲ. ವಿನಾಕಾರಣ ಇದನ್ನು ತೆರವುಗೊಳಿಸಲಾಗುತ್ತಿದೆ ಎಂದ ಪ್ರಸಾದ್ ಅಬ್ಬಯ್ಯ, ಉಣಕಲ್ ಸಿದ್ದಪಜ್ಜನ ಮಠ, ರಾಮಲಿಂಗೇಶ್ವರ ದೇವಸ್ಥಾನಗಳು ಇದೇ ರೀತಿಯಲ್ಲಿದ್ದರೂ ಸಹ, ಅವುಗಳ ಮೇಲೆ ಫ್ಲೈಓವರ್ ನಿರ್ಮಿಸಲಾಗಿದೆ. ಹಾಗೆಯೇ ಇಲ್ಲಿಯೂ ಸಹ ಫ್ಲೈಓವರ್ ಮಾಡಬಹುದಿತ್ತು. ಸರ್ಕಾರ ಈ ರೀತಿಯ ತಾರತಮ್ಯ ನೀತಿ ಅನುಸರಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು.ಸದನದಲ್ಲಿ ಅವಕಾಶ ಸಿಕ್ಕರೆ, ದರ್ಗಾ ತೆರವು ವಿಚಾರ ಪ್ರಸ್ತಾಪಿಸಲಾಗುವುದು ಎಂದು ಪ್ರಸಾದ್ ಅಬ್ಬಯ್ಯ ತಿಳಿಸಿದರು.