'ಭಾರತ್ ಜೋಡೊ' ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ: ದಿನೇಶ್ ಗೂಂಡೂರಾವ್

'ಭಾರತ್ ಜೋಡೊ' ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ: ದಿನೇಶ್ ಗೂಂಡೂರಾವ್

ಬೆಂಗಳೂರು: 'ರಾಜ್ಯದಲ್ಲಿ ಸಾಗಿದ 'ಭಾರತ ಐಕ್ಯತಾ ಯಾತ್ರೆ' ನಾವು ನಿರೀಕ್ಷಿಸದಷ್ಟು ಮಟ್ಟಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಯಾತ್ರೆಗೆ ರಾಜ್ಯದ ಜನ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಅಭಾರಿಗಳು. ಕರ್ನಾಟಕದವರು ದ್ವೇಷದ ಆರಾಧಕರಲ್ಲ, ಪ್ರೀತಿಯ ಆರಾಧಕರು ಎಂಬುದು ಈ ಯಾತ್ರೆಗೆ ಸಿಕ್ಕ ಜನಬೆಂಬಲವೇ ಸಾಕ್ಷಿ' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗೂಂಡೂರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಮೊದಲು ಅಪಮಾನಿಸುತ್ತಾರೆ, ನಂತರ ಅನುಮಾನಿಸುತ್ತಾರೆ, ಕೊನೆಗೆ ಸನ್ಮಾನಿಸುತ್ತಾರೆ ಎಂಬಂತೆ ಜೋಡೊ ಯಾತ್ರೆ ಪ್ರಾರಂಭದಲ್ಲಿ BJPಯವರು ಯಾತ್ರೆಯನ್ನು ಅಪಮಾನಿಸುವ ಕೆಲಸ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು ನಿಂದಿಸಿದ್ದರು. ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ BJPಯವರಿಗೆ ಕಷ್ಟವಾಗಿದೆ' ಎಂದು ಟೀಕಿಸಿದ್ದಾರೆ.

''ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ. ಈಗಾಗಲೇ ತಮಿಳುನಾಡು, ಕೇರಳ‌ ಮತ್ತು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ. ಯಾಕೆಂದರೆ ಇದು ಹೃದಯ ಬೆಸೆಯುವ ಯಾತ್ರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.