ಬೆಚ್ಚಗಿರಲಿ ಚಳಿಗಾಲ

1. ಬೆಚ್ಚಗಿರಲಿ ಚಳಿಗಾಲ

ಬೆಚ್ಚಗಿರಲಿ ಚಳಿಗಾಲ
ಶರದೃತುವಿನ ಆಗಮನವಾಗಿದೆ. ಚಳಿಯಿಂದ ನಡುಕವೇರುವ ಹೊತ್ತು. ಪ್ರಕೃತಿಯಲ್ಲಿನ ಈ ಬದಲಾವಣೆ ಹಳ್ಳಿ, ನಗರವೆನ್ನದೆ ಸಾರ್ವತ್ರಿಕವಾಗಿ ಬದುಕಿನ ಬಗೆಯಲ್ಲಿಯೂ ತೆರೆದುಕೊಳ್ಳುವ ವೇಳೆ. ಚಳಿರಾಯನ ಒಡ್ಡೋಲಗದ ನೆಪದಲ್ಲಿಈ ಲೇಖನ.

ಅರ್ಧ ಪಾವು ಎಳ್ಳು ಹುರಿದಿಡಮ್ಮಾ. ಚಿಗಳಿ ಮಾಡೂಣು... ದಿನಕ್ಕೊಂದು ಹೊಸರುಚಿ ಬಯಸುವ ಅತ್ತೆಯ ಉಮೇದಿಗೆ ಗಡಿಬಿಡಿಯ ಸೊಸೆಗೆ ತುಸು ಕೋಪ.

'ನನ್ನ ಮಫ್ಲರ್‌ ಎಲ್ಲೇ ತಾಯಿ... ಹುಡುಕ್ತಾನೇ ಇದೀನಿ' ಅಪ್ಪ ಆಗಿಂದಲೂ ಕೇಳ್ತಿದ್ದಾರೆ.

'ಅಮ್ಮ.. ಹೇರ್‌ ಫಾಲು, ತುಟಿನೂ ಉರೀತಿದೆ.. ಏನ ಹಚ್ಚಲಿ' ಮಗಳದು ಫೋನಿನ ಮೇಲೆ ಫೋನು.

'ಹಸ ಒಳಗೆ ಕಟ್ಟಿಯೋ... ಕಾವಳಕ್ಕೆ ಹಾಲು ಇಂಗಿ ಮೈ ಬಿಡ್ತವೆ ದನ', ಕೆಳಗಿನ ಮನೆಯ ಅಜ್ಜಿ ಕೂಗಿ ಮಗನಿಗೆ ಹೇಳ್ತಿದ್ದಾಳೆ.

ಹೌದು, ಚಳಿಗಾಲ ಬಂದಾಯ್ತು. ಕಾರ್ತೀಕದಿಂದ ಮಾಗಿಯವರೆಗೆ ಭೂಮಿಯ ಉತ್ತರಾರ್ಧಕ್ಕೆ ಗಡಗಡ ನಡುಕ. ಮೂರು ತಿಂಗಳು ವ್ಯಾಪಿಸುವ ಈ ಚಳಿಗಾಲದಲ್ಲಿವಿಶೇಷವಾಗಿ ಕಾರ್ತೀಕದಲ್ಲಿರಾತ್ರಿಗಳು ವಾಡಿಕೆಗಿಂತ ದೀರ್ಘ. ಏಳಕ್ಕೇ ಕಣ್ಣೆಳೆಯುವ ಮಹಾಶಯರಿಗೆ ಈಗ ರಾಜಯೋಗ. ಕಾಲ ಮಹಿಮೆಯಂತೆ ಜಠರಾಗ್ನಿ ಬದಲಾಗುವ ಚಳಿಗಾಲದಲ್ಲಿಆಹಾರದ ಜೊತೆಗೆ ದಿನಚರಿಯಲ್ಲೂಸಣ್ಣ ಬದಲಾವಣೆಗೆ ಪಕ್ಕಾಗುವ ಕಾಲ.

ಆಹಾರದಿಂದ ಶುರು ಬದಲಾವಣೆ

ಹೇಳಿಕೇಳಿ ಚಳಿಗಾಲ, ಆರೋಗ್ಯ ಜೋಪಾನ ಎನ್ನುವ ಕಾಲ. ಹೆಚ್ಚು ನೀರು ಕುಡಿಯಿರಿ, ಬಿಸಿ ನೀರನ್ನೇ ಕುಡಿಯಿರಿ ಎಂದೆಲ್ಲಅಮ್ಮ ಮನೆಮಂದಿಗೆಲ್ಲಕಾಳಜಿ ಮಾಡುವ ಈ ಸಮಯ ಬಿರಿಯುವ ಚರ್ಮ, ತುಟಿ, ಕೂದಲು ಎಲ್ಲವೂ ನಮ್ಮನ್ನೂ ಸ್ವಲ್ಪ ನೋಡಿಕೊಳ್ಳಿ ಎನ್ನುತ್ತವೆ. ಚಳಿಗಾಲದ ಮೂರು ಪ್ರಮುಖ ಹಬ್ಬಗಳಲ್ಲೂಋುತುಗನುಗುಣವಾದ ಆಹಾರದ್ದೇ ವೈಭವ. ಡಿಸೆಂಬರಿನಲ್ಲಿಬರುವ ಸುಬ್ರಮಣ್ಯ ಷಷ್ಠಿಯಲ್ಲಿಸಕಲ ತರಕಾರಿ, ಮೊಳಕೆ ಕಾಳು, ಕಾಡಿನಲ್ಲಿಸಿಗುವ ಗೆಡ್ಡೆಗೆಣಸುಗಳನ್ನು ಸೇರಿಸಿ ಕೂಟು ತಯಾರಿಸಿ ಅನ್ನದ ಜೊತೆಗೆ ನೈವೇದ್ಯ ಮಾಡುವುದು ವಾಡಿಕೆ. ಸಂಕ್ರಾಂತಿಯಲ್ಲಿದೇಹ ಪೋಷಣೆಗೆ ಅಗತ್ಯವಾದ ಎಳ್ಳು , ಬೆಲ್ಲ, ಕೊಬ್ಬರಿ, ನೆಲಗಡಲೆ, ಕಿತ್ತಳೆ, ಕಬ್ಬು , ಅವರೆಕಾಳುಗಳು ಸಮೃದ್ಧಿ. 'ಶಿವರಾತ್ರಿಗೆ ಶಿವಶಿವ' ಅಂತ ಚಳಿ ಹೊರಡ್ತದೆ ಎನುವುದು ನಮ್ಮ ಗ್ರಾಮೀಣರ ನುಡಿಗಟ್ಟು. ಸಂಪೂರ್ಣ ಆಹಾರ ಎನಿಸಿಕೊಳ್ಳುವ ವಿಧವಿಧವಾದ ತಂಬಿಟ್ಟು ಶಿವರಾತ್ರಿ ನೈವೇದ್ಯಕ್ಕೆ ಆಗಲೇ ಬೇಕು. ದೇವರ ಹೆಸರಲ್ಲಿದೇಹದ ಪುಷ್ಟಿ..!

ಚಳಿಗಾಲದಲ್ಲಿಸಹಜವಾಗಿಯೇ ದೈಹಿಕ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ತೀಕ್ಷ$್ಣ ಚಳಿಯ ಜೊತೆಗೆ ಕಾವಳ ಸುರಿವ ಮುಂಜಾವು, ಏನು ತಾಕಿದರೂ ನಡುಗುವಂತಾಗುವ ಇಳಿಸಂಜೆಗಳು ಇದಕ್ಕೆ ಕಾರಣ. ವಾಕಿಂಗು, ಯೋಗ ಯಾರಿಗ್ಬೇಕು..? ಬಿಸಿ ಬಿಸಿ ಕಾಫಿ ಕುಡೀತಾ ಬಜ್ಜಿ ಬೋಂಡ ತಿಂದು ಬೆಚ್ಚಗೆ ಹೊದ್ದು ಮಲಗುವುದನ್ನೇ ಬಯಸುತ್ತದೆ ಮನಸ್ಸು. ಟೀ, ಕಾಫಿ ಮಿತಗೊಳಿಸಿ ಶುಂಠಿ, ಕೊತ್ತಂಬರಿ, ಪುದೀನ ಕಷಾಯ ಕುಡೀರಿ ಅಂತಾರೆ ಮನೆಯ ಹಿರಿಯರು. ಜೊತೆಗೆ ವಾರಕ್ಕೊಮ್ಮೆ ತಲೆಗೆ ಮತ್ತು ಮೈಗೆ ಅಭ್ಯಂಜನ ಮಾಡಿದರೆ ಆ ಸುಖಕ್ಕೆ ಸಾಟಿ ಬೇರಿಲ್ಲ.

ನಡುಗುವ ಚಳಿಯಲ್ಲಿಬೆಳಗಿನ ಮೊದಲ ಜಾವದಲ್ಲೇ ಎದ್ದು ಮನೆ ಮನ ಮತ್ತು ದೇಹ ಶುದ್ಧಿಗೊಳಿಸಿ ಬಿಲ್ವಪತ್ರೆಯಿಂದ ಶಿವನನ್ನು ಅರ್ಚಿಸುವ ಧನುರ್ಮಾಸ ಪೂಜೆಯೂ ಈ ಚಳಿಗಾಲದ ವಿಶೇಷ. ಈ ಆಚರಣೆಯೊಂದಿಗೆ ಅಡಗಿರುವ ವೈಜ್ಞಾನಿಕ ಸಂಗತಿಗಳು ನಿಜಕ್ಕೂ ಪೂರ್ವಿಕರ ಕುರಿತು ಅಚ್ಚರಿ ಹುಟ್ಟಿಸುತ್ತವೆ.

ಚಳಿಗಾಲವೆಂದರೆ ಬೆಚ್ಚಗಿರುವುದು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಉಣ್ಣುವ, ಆಪ್ತವಾಗಿ ಮಾತುಕತೆಯಾಡುವ, ಬಾಂಧವ್ಯದಲ್ಲಿಸ್ಪರ್ಶ-ಅಪುತ್ರ್ಪಗೆಗಳಿಂದ ಮನಸ್ಸು-ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ಸುಖ ಚಳಿಗಾಲದ ಸ್ಪೆಷಲ್‌ ಗಿಫ್ಟ್‌.

ವಿಂಟರ್‌ ಸಂಭ್ರಮಗಳು

ಚಳಿಗಾಲಕ್ಕೇ ಕಾಯ್ದವರಂತೆ ನಮ್ಮ ಶಾಲಾ ಕಾಲೇಜುಗಳು ನಡುರಾತ್ರಿವರೆಗೆ ವಾರ್ಷಿಕೋತ್ಸವ ಮಾಡಿ ಗಡಗಡ ನಡುಗುತ್ತಾ ಮಕ್ಕಳ ಸಂಭ್ರಮ ಕಣ್ತುಂಬಿಕೊಳ್ಳುವುದು, ಡಿಸೆಂಬರಿನ ರಜೆಯಲ್ಲಿತಿರುಗಾಟ ಪ್ಲ್ಯಾನ್‌ ಮಾಡುವುದು ನಗರದ ಚಳಿಗಾಲದ ಸಂಭ್ರಮವಾದರೆ ನಮ್ಮ ಗ್ರಾಮೀಣ ಭಾಗದಲ್ಲಿಚಳಿಗಾಲವೆಂದರೆ ಸುಗ್ಗಿ ಸಮಯದ ಖುಷಿ. ಭತ್ತ, ರಾಗಿ, ಜೋಳ, ದ್ವಿದಳಧಾನ್ಯಗಳನ್ನು ಕುಯ್ದು ಬಣವೆ ಒಟ್ಟಿ ಒಕ್ಕಲಾಡಿಸಿ ಸ್ವಾಮಿ ಮೂಡುವ ಮುನ್ನವೇ ಕೇರಿ, ತೂರಿ ಚೀಲಕ್ಕೆ ತುಂಬಿ ಕಣಜ ಕಾಣಿಸುವ ಕಾಯಕ. ಕಾಫಿ ಹಣ್ಣು ಪಕ್ವವಾಗುವುದೂ ಇದೇ ಚಳಿಗಾಲದಲ್ಲಿಯೇ. ತೀಕ್ಷ$್ಣ ಬಿಸಿಲಲ್ಲಿಹಣ್ಣು ಕುಯ್ದು, ಪಲ್ಪರ್‌ ಮಾಡಿಸಿ, ಬೇಳೆ ಒಣಗಿಸುವ, ಕಾಲಾಡುವ, ತೇವಾಂಶ ಗಮನಿಸಿ ಎತ್ತಿಡುವ ಮೈತುಂಬ ಕೆಲಸದ ಕಾಲ. ಅಜ್ಜಿ ಅಮ್ಮಂದಿರಿಗೆ ಹಪ್ಪಳ, ಸಂಡಿಗೆ, ಬಾಳಕಗಳನ್ನು ಮಾಡುವ, ಕಳೆದ ವರ್ಷದ್ದು ಉಳಿದಿದ್ದರೆ ಮತ್ತೆ ಮೈಕಾಯಿಸಿ ಅವುಗಳನ್ನು ತಾಜಾ ಆಗಿಸುವ ಉಮೇದು.

ಜೊತೆಗೆ ದನಕರುಗಳಲ್ಲಿಹಾಲಿನ ಪ್ರಮಾಣ ಕಡಿಮೆಯಾಗಿ ಗುಣಮಟ್ಟ (ಕೊಬ್ಬು ಮತ್ತು ಪ್ರೋಟೀನ್‌)ಹೆಚ್ಚಾಗುವುದಲ್ಲದೆ ದನಗಳು ಬೆದೆಗೆ ಬರುವುದೂ ಬಹುತೇಕ ಇದೇ ಸಮಯದಲ್ಲಿ. ಒಕ್ಕಲಾಟ ಮುಗಿದು ತುಸು ಮೈ ಸುಧಾರಿಸಿಕೊಂಡ ಕೂಡಲೇ ಹೊಲಗದ್ದೆಗಳಲ್ಲಿಮತ್ತೆ 'ಮಾಗಿ ಉಳುಮೆ' ಆರಂಭ. ಕಾವಳ ಕುಡಿದ ನೆಲ ಫಲವತ್ತಾಗಿ, ಕ್ರಿಮಿಕೀಟಗಳ ಮೊಟ್ಟೆ, ಹುಳುಗಳು ರವಗುಡುವ ಬಿಸಿಲಿಗೆ ಸುಟ್ಟು ಹೋಗಿ ಜಮೀನು ಮತ್ತೆ ಮರು ಬೆಳೆಗೆ ಅಣಿ ಮಾಡುವುದು ಈಗಲೇ.

ಜೊತೆಗೆ ಚಳಿಗಾಲದಲ್ಲಿಹಾವುಗಳು ಬೆದೆಗೆ ಬರುವ ಸಮಯ. ಜಮೀನಿನ ಬದುಗಳಲ್ಲಿಮಾಗಿ ಬಿಸಿಲಿಗೆ ಮೈಯೊಡ್ಡಿ ಮಲಗಿರುವ ಇವುಗಳು ನಡೆಯುವಾಗ ಕಾಣದೆ ಅಪಾಯವೂ ಇದ್ದದ್ದೆ.

'ಮಾಗಿ ಕಾಲಕ್ಕೆ ಮನಿಯೆಲ್ಲಧೂಳು' ಅನ್ನುವುದೂ ಗ್ರಾಮೀಣ ಭಾಗದಲ್ಲಿಚಳಿಗಾಲದಲ್ಲಿಸಾಮಾನ್ಯವಾಗಿ ಕೇಳಲು ಸಿಗುವ ಮಾತು. ಊರಿಗೆ ಊರೇ ಭತ್ತದ ಒಕ್ಕಲಾಟ ಮಾಡುವುದರಿಂದಲೂ ಶುಷ್ಕ ಹವೆ ಇರುವುದರಿಂದಲೂ ಪೈರುಮುಡಿಯನ್ನು ಒಕ್ಕುವಾಗ ಎಷ್ಟು ಸ್ವಚ್ಛ ಮಾಡಿದರೂ ಹಟ್ಟಿಯೂ ಹಜಾರವೂ ಧೂಳೋಧೂಳು. ನಗರದ ಮನೆಗಳೂ ಇದಕ್ಕೆ ಹೊರತಲ್ಲ. ರಸ್ತೆ ಧೂಳೆಲ್ಲಾ ಮನೆಯೊಳಗೆ ಬಂದು ಧೂಳು ಜಾಡಿಸೋ ಕೆಲಸ ದಿನಚರಿಯಲ್ಲಿಪ್ರಮುಖ.