ಬಿಹಾರದಲ್ಲಿ ಕೋವಿಡ್‌ 3ನೇ ಅಲೆ ಆರಂಭ: ಸಿಎಂ ನಿತೀಶ್‌

ಬಿಹಾರದಲ್ಲಿ ಕೋವಿಡ್‌ 3ನೇ ಅಲೆ ಆರಂಭ: ಸಿಎಂ ನಿತೀಶ್‌

ಪಾಟ್ನಾ, ಡಿಸೆಂಬರ್‌ 29: ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳು ಹೆಚ್ಚಳ ಆಗುತ್ತಿದೆ. ಈ ನಡುವೆಯೇ "ಬಿಹಾರದಲ್ಲಿ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆ ಆರಂಭವಾಗಿದೆ," ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 47 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲು ಆದ ಬೆನ್ನಲ್ಲೇ ಮುಖ್ಯಮಂತ್ರಿ ಈ ಹೇಳಿಕೆಯನ್ನು ನೀಡಿದ್ದಾರೆ.

ಡಿಸೆಂಬರ್‌ 25 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ರಾಜ್ಯದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಠಿಣಗೊಳಿಸುವ ಸೂಚನೆಯನ್ನು ನೀಡಿದ್ದಾರೆ. ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಅಧಿಕವಾಗುತ್ತಿರುವ ನಡುವೆಯೇ ಬಿಹಾರ ಮುಖ್ಯಮಂತ್ರಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕದ ಹಿನ್ನೆಲೆ ಜಾರಿಗೆ ತರಲಾದ ಮಾರ್ಗಸೂಚಿಯನ್ನು ಬಿಗಿಗೊಳಿಸಲಾಗುವುದು ಎಂದು ಹೇಳಿದ್ದರು.

ಇನ್ನು ಬಿಹಾರದ ನೆರೆ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಿಂದಾಗಿ ನೈಟ್‌ ಕರ್ಫ್ಯೂ ಅನ್ನು ಜಾರಿ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳು ಬಿಹಾರ ಮುಖ್ಯಮಂತ್ರಿಯನ್ನು ಪ್ರಶ್ನೆ ಮಾಡಿದಾಗ, "ಇಲ್ಲಿ ನೈಟ್‌ ಕರ್ಫ್ಯೂ ಮಾಡುವಂತಹ ಅಗತ್ಯ ಇಲ್ಲ," ಎಂದು ತಿಳಿಸಿದ್ದಾರೆ.

"ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ಆರಂಭವಾಗಿದೆ. ಮೂರನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವೈದ್ಯಕೀಯ ಸಿಬ್ಬಂದಿಗಳು ಈ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ," ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ ಎಂದು ವರದಿ ಆಗಿದೆ. "ಕೊರೊನಾ ವೈರಸ್ ಸೋಂಕಿನ ಮೊದಲ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯರ ಸೇವೆಯು ಅಸಾಮಾನ್ಯ, ಈ ಮೂರನೇ ಅಲೆಯ ಸಂದರ್ಭದಲ್ಲೂ ವೈದ್ಯರು ಅದೇ ರೀತಿಯಾಗಿ ಸಹಕಾರ ನೀಡಬೇಕು ಎಂದು ನಾನು ಮನವಿ ಮಾಡು‌ತ್ತೇನೆ," ಎಂದು ಕೂಡಾ ಹೇಳಿದ್ದಾರೆ.

ಇನ್ನು ಬಿಹಾರದಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ಅಲೆ ಓಮಿಕ್ರಾನ್‌ ತಡೆಗಟ್ಟುವ ನಿಟ್ಟಿನಲ್ಲಿಯೂ ಸರ್ಕಾರ ಕ್ರಮವನ್ನು ಕೈಗೊಂಡಿದೆ. ಈ ಹೊಸ ವರ್ಷದ ಸಂದರ್ಭದಲ್ಲಿ ಡಿಸೆಂಬರ್‌ 31 ರಿಂದ ಜನವರಿ 2 ರವರೆಗೆ ಪಾರ್ಕ್‌ಗಳನ್ನು ಬಂದ್‌ ಮಾಡಲಾಗಿದೆ. "ಯಾವುದೇ ಪಾರ್ಕ್‌ಗಳಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಲು ಅವಕಾಶ ನೀಡಬಾರದು ಎಂಬ ನಿರ್ಧಾರವನ್ನು ಕೂಡಾ ಕೈಗೊಳ್ಳಲಾಗಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ," ಎಂದು ತಿಳಿಸಿದ್ದಾರೆ. ಬಿಹಾರದಲ್ಲಿ ಈವರೆಗೂ ಯಾವುದೇ ಓಮಿಕ್ರಾನ್ ಪ್ರಕರಣಗಳು ವರದಿ ಆಗಿಲ್ಲ.

ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 781 ಕ್ಕೆ ಏರಿಕೆ ಕಂಡಿದೆ. ಭಾರತ ದೇಶದ ಒಟ್ಟು 21 ರಾಜ್ಯಗಳಲ್ಲಿ ಈ ಹೊಸ ರೂಪಾಂತರವು ಕಾಣಿಸಿಕೊಂಡಿದೆ. ದೇಶದಲ್ಲಿ ಈವರೆಗೆ ದಾಖಲಾದ ಒಟ್ಟು 781 ಓಮಿಕ್ರಾನ್ ಪ್ರಕರಣಗಳ ಪೈಕಿ 238 ಪ್ರಕರಣಗಳು ದೆಹಲಿಯಲ್ಲೇ ದಾಖಲು ಆಗಿದೆ. ಇನ್ನು ಮಹಾರಾಷ್ಟ್ರದಲ್ಲಿ 167 ಓಮಿಕ್ರಾನ್‌ ಪ್ರಕರಣಗಳು ದಾಖಲು ಆಗಿದೆ. ಗುಜಾರಾತ್‌ನಲ್ಲಿ 73 ಹಾಗೂ ಕೇರಳದಲ್ಲಿ 65 ಓಮಿಕ್ರಾನ್‌ ಪ್ರಕರಣಗಳು ದಾಖಲು ಆಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,195 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲು ಆಗಿದೆ. ನಿನ್ನೆ ದೇಶದಲ್ಲಿ 6,358 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲು ಆಗಿದ್ದು, ಇಂದು 9,195 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲು ಆಗುವ ಮೂಲಕ ದೇಶದಲ್ಲಿ ನಿನ್ನೆಯಿಂದ ಇಂದಿಗೆ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಯು ಶೇಕಡ 44 ಏರಿಕೆ ಆಗಿದೆ.