ಬಸ್ ಗೆ ಫಾರ್ಚುನರ್ ಕಾರು ಢಿಕ್ಕಿ: ಶಾಸಕರ ಅಳಿಯ ಸೇರಿ ನಾಲ್ವರ ಸಾವು

ಬಸ್ ಗೆ ಫಾರ್ಚುನರ್ ಕಾರು ಢಿಕ್ಕಿ: ಶಾಸಕರ ಅಳಿಯ ಸೇರಿ ನಾಲ್ವರ ಸಾವು

ವಿಜಯಪುರ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಫಾರ್ಚುನರ್ ಕಾರು ಮಧ್ಯೆ ಮುಖಾಮುಖಿ ಅಪಘಾತದಲ್ಲಿ, ಜಿಲ್ಲೆಯ ಶಾಸಕರೊಬ್ಬರ ಅಳಿಯ ಸೇರಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತರಲ್ಲಿ ಜಿಲ್ಲೆಯ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಅಕ್ಕನ‌ಮಗ ವಿಜಯ ದೊಡಮನಿ (45 ವ), ಆತನ ಸ್ನೇಹಿತರಾದ ಚಿದಾನಂದ ನಾಗೇಶ ಸೂರ್ಯವಂಶಿ (45 ವ), ಸೋಮನಾಥ ಕಾಳೆ (43 ವ) ಹಾಗೂ ಸಂದೀಪ ಪವಾರ (40 ವ) ಎಂದು ಗುರುತಿಸಲಾಗಿದೆ.

ಮೃತರು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದವರು.

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭಾನುವಾರ ರಾತ್ರಿ ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಜುಮನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಫಾರ್ಚುನರ್ ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ನಿಶ್ಚಿತಾರ್ಥಕ್ಕಾಗಿ ಗುತ್ತಿಯ ಬಾಡಿಗೆ ಪಡೆದಿದ್ದ ಕೆಎ 22 ಎಫ್ 2198 ಸಂಖ್ಯೆಯ ಬಸ್ ನರಗುಂದ ನಗರದತ್ತ ತೆರಳುತ್ತಿದ್ದಾಗ ಎದುರಿಗೆ ವೇಗವಾಗಿ ಆಗಮಿಸಿದ ಎಂಎಚ್ 13 ಸಿಎಸ್ 3330 ಸಂಖ್ಯೆಯ ಕಾರು ಮುಖಾಮುಖಿ ಡಿಕ್ಕಿಯಾಗಿವೆ.

ಅಪಘಾತದ ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಅಪಘಾತ ದುರಂತದ ಕಾರಣ ರಾಷ್ಟ್ರೀಯ ಹೆದ್ದಾರಿ- 52 ರಲ್ಲಿ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾಗಿತ್ತು.