ಬಡವರ ಮನೆ ಮಗನಿಗೆ ದುಬಾರಿ ಗಿಫ್ಟ್: ಬೆಲೆ ಎಷ್ಟು? ರಮ್ಯಾ ಕೇಳಿದ ಟ್ರೀಟ್ ಏನು

ಬಡವರ ಮನೆ ಮಗನಿಗೆ ದುಬಾರಿ ಗಿಫ್ಟ್: ಬೆಲೆ ಎಷ್ಟು? ರಮ್ಯಾ ಕೇಳಿದ ಟ್ರೀಟ್ ಏನು

ಡಾಲಿ ಧನಂಜಯ್ 25ನೇ ಸಿನಿಮಾ 'ಗುರುದೇವ್ ಹೊಯ್ಸಳ' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಮೊದಲ ದಿನದಲ್ಲೇ ಈ ಸಿನಿಮಾ ಮೌತ್ ಪಬ್ಲಿಸಿಟಿ ಸಿಗುತ್ತಿದೆ. ಈ ಕಾರಣಕ್ಕೆ ಚಿತ್ರಮಂದಿರದಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ.

'ಗುರುದೇವ್ ಹೊಯ್ಸಳ' ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಮುಂದಿನ ವಾರ ಕೂಡ ಯಾವುದೇ ದೊಡ್ಡ ಸಿನಿಮಾ ಇಲ್ಲದೆ ಇರೋದ್ರಿಂದ ಈ ಸಿನಿಮಾಗೆ ಅಡ್ವಾಂಟೇಜ್ ಹೆಚ್ಚಿದೆ.ಈ ಬೆನ್ನಲ್ಲೇ ಸಿನಿಮಾಗೆ ಸಿಕ್ಕಿರೋ ಪ್ರತಿಕ್ರಿಯೆಗೆ ನಿರ್ಮಾಪಕರು ಖುಷಿಯಾಗಿದ್ದು, ಡಾಲಿ ಧನಂಜಯ್‌ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

ಧನಂಜಯ್ 25ನೇ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಧನಂಜಯ್ ಕೂಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಟೊಯೋಟಾ ವೆಲ್ಫೈರ್ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿರೋ ಬೆನ್ನಲ್ಲೇ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ 1 ಕೋಟಿ ರೂ. ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಖುಷಿ ವಿಷಯವನ್ನು ಸ್ವತ: ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಾಲಿಗೆ ಕೊಟ್ಟಿರೋ ಟೊಯೊಟೋ ವೆಲ್​ಫೈರ್​ ಕಾರಿನ ಎಕ್ಸ್‌ ಶೋ ರೂಮ್ ಬೆಲೆ 96.55 ಲಕ್ಷ ರೂಪಾಯಿ. ಈ ಕಾರು ರಸ್ತೆಗೆ ಇಳಿಯುವಾಗ ಬರೋಬ್ಬರಿ 1 ಕೋಟಿ 20 ಲಕ್ಷ ರೂಪಾಯಿ ಆದರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಹಾಗೂ ಧನಂಜಯ್ ಮೂವರೂ ಕಾರಿನೊಂದಿಗೆ ನಿಂತಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಶೇರ್ ಮಾಡಿಕೊಂಡಿದ್ದಾರೆ.

ಧನಂಜಯ್ ಟ್ವೀಟ್‌ನಲ್ಲಿ ಏನಿದೆ?

ಧನಂಜಯ್ 25ನೇ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಥಿಯೇಟರ್‌ನಲ್ಲಿ ಹೇಗೆ ಕಲೆಕ್ಷನ್ ಮಾಡುತ್ತೆ ಅನ್ನೋ ಕುತೂಹಲವಿದೆ. ಈ ಮಧ್ಯೆನೇ ನಿರ್ಮಾಪಕರು ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದು, ಸಿನಿಮಾದ ಗಳಿಕೆನೂ ಅಷ್ಟೇ ಚೆನ್ನಾಗಿದೆ ಅನ್ನೋದನ್ನು ಊಹಿಸಬಹುದು.

ವಿಶೇಷ ವ್ಯಕ್ತಿಗಳಿಂದ 25ನೇ ಸಿನಿಮಾ ಮತ್ತು ವಿಶೇಷ ಗಿಫ್ಟ್. ಲವ್ ಯು ಮತ್ತು ಮುಂದೆ ಒಟ್ಟಿಗೆ ಮಾಡಲು ಹೊರ ಕೆಲಸಗಳಿಗೆ ಚೀಯರ್ಸ್. ಒಳ್ಳೆ ನೆನಪುಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ." ಎಂದು ಧನಂಜಯ್ ಫೋಟೊ ಶೇರ್ ಮಾಡಿ, ಖುಷಿಯನ್ನು ಹಂಚಿಕೊಂಡಿದ್ದಾರೆ.

ರಮ್ಯಾ ಕೇಳಿದ ಗಿಫ್ಟ್ ಏನು?

ಡಾಲಿ ಧನಂಜಯ್ ಹಾಗೂ ಕೆಆರ್‌ಜಿ ಸ್ಟುಡಿಯೋದ ನಿರ್ಮಾಪಕರು ಟೊಯೋಟಾ ವೆಲ್ಫೈರ್ ಜೊತೆಗಿನ ಫೋಟೊ ಫೋಸ್ಟ್‌ ಮಾಡುತ್ತಿದ್ದಂತೆ ಮೋಹಕತಾರೆ ಟ್ವೀಟ್ ಮಾಡಿದ್ದಾರೆ. ಧನಂಜಯ್ ಹಾಗೂ ಇಡೀ ತಂಡಕ್ಕೆ ಶುಭಕೋರಿದ್ದಾರೆ. "ಹೊಸ ಕಾರು ಬಂದಿದ್ದಕ್ಕಾಗಿ ಅಭಿನಂದನೆಗಳು ಹಾಗೇ ಹೊಯ್ಸಳ ಸಿನಿಮಾ ಸಕ್ಸಸ್ ಕಂಡಿದ್ದಕ್ಕೂ ಧನ್ಯವಾದಗಳು. ಈಗ ನೀವು ನಿಮ್ಮ ಹೊಸ ಕಾರಿನಲ್ಲಿ ಕಾರ್ನರ್ ಹೌಸ್‌ ಕರೆದುಕೊಂಡು ಹೋಗಿ ಚಾಕೊಲೇಟ್ ಫಜ್ ಕೊಡಿಸಿ. ಯಾವಾಗ ಕರ್ಕೊಂಡು ಹೋಗ್ತೀರಾ?" ಎಂದು ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ." ಈಗಲೇ, ಈ ಕ್ಷಣದಲ್ಲೆ ಹೋಗಣ ಬನ್ನಿ.." ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ರಮ್ಯಾ " ಸುಮ್ನೆ ಹೇಳ್ಬೇಡಿ ಐಸ್‌ಕ್ರೀಂಗೋಸ್ಕರ ನಾನು 24/7 ರೆಡಿ " ಎಂದು ಟ್ವೀಟ್‌ ಮಾಡಿದ್ದರು. ಅದಕ್ಕೆ ಡಾಲಿ " ಬಂದೆ ಇರಿ.. 10 ನಿಮಿಷ.. ರೆಡಿ ಆಗ್ಬಿಡಿ ಹೋಗೋಣ." ಎಂದು ಪ್ರತಿಕ್ರಿಯಿಸಿದ್ದಾರೆ.

ಧನಂಜಯ್ ವೃತ್ತಿ ಬದುಕಿನ ಮೈಲಿಗಲ್ಲು

ಡಾಲಿ ಧನಂಜಯ್ ವೃತ್ತಿ ಬದುಕಿಗೆ 'ಗುರುದೇವ್ ಹೊಯ್ಸಳ' ಒಂದು ಹೊಸ ಮೈಲಿಗಲ್ಲು. 25ನೇ ಸಿನಿಮಾ ಆಗಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತೆ? ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ? ಅನ್ನೋದನ್ನು ಸ್ಯಾಂಡಲ್‌ವುಡ್ ಮಂದಿ ಎದುರು ನೋಡುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ದುಪ್ಪಟ್ಟಾದರೆ, ಸಿನಿಮಾ ಗೆದ್ದಂತೆಯೇ.

'ಗೀತಾ' ಬಳಿಕ ವಿಜಯ್ ಎನ್ ನಿರ್ದೇಶನದ ಎರಡನೇ ಸಿನಿಮಾ. ಡಾಲಿ ಧನಂಜಯ್‌ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿ ನವೀನ್ ಕೃಷ್ಣ ಈ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಹಾಗೇ ಅನಿರುದ್ಧ್ ಭಟ್, ಮಯೂರಿ ನಟರಾಜ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಹೊಯ್ಸಳ'ನನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕ್ರೇಜ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ.