ಬಂತು ಕೆಎಸ್‌ಆರ್‌ಟಿಸಿ "ಇವಿ ಪವರ್‌ ಪ್ಲಸ್‌' ಬಸ್‌! ಎಲ್ಲ ಎಲೆಕ್ಟ್ರಿಕ್‌ ಬಸ್‌ ಗಳಿಗೂ ಕೆಂಪು ಬಣ್ಣ

ಬಂತು ಕೆಎಸ್‌ಆರ್‌ಟಿಸಿ "ಇವಿ ಪವರ್‌ ಪ್ಲಸ್‌' ಬಸ್‌! ಎಲ್ಲ ಎಲೆಕ್ಟ್ರಿಕ್‌ ಬಸ್‌ ಗಳಿಗೂ ಕೆಂಪು ಬಣ್ಣ

ಬೆಂಗಳೂರು: ರಾಜ್ಯದ ಮೊದಲ ವಿದ್ಯುತ್‌ ಚಾಲಿತ ಕೆಎಸ್‌ಆರ್‌ಟಿಸಿ “ಇವಿ ಪವರ್‌ ಪ್ಲಸ್‌’ ಬಸ್‌ ಶನಿವಾರ ರಸ್ತೆಗಿಳಿಯಿತು.

ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ನೂತನ ಬಸ್‌ಗೆ ಚಾಲನೆ ನೀಡಿ, ಎಲೆಕ್ಟ್ರಿಕ್‌ ಬಸ್‌ ಬೆಂಗಳೂರಿನಿಂದ -ಮೈಸೂರಿಗೆ ಸಂಚರಿಸಲಿದೆ ಎಂದು ಹೇಳಿದರು.

ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿಗೆ ಎಲೆಕ್ಟ್ರಿಕ್‌ ಬಸ್‌ ಕಾರ್ಯ ನಿರ್ವಹಿಸಲಿದೆ. ಸದ್ಯ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಮುಂದೆ ಎಲ್ಲ ಎಲೆ ಕ್ಟ್ರಿಕ್‌ ಬಸ್‌ಗಳಿಗೂ ಕೆಂಪು ಬಣ್ಣ ಇರಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ವಿದ್ಯುತ್‌ ಫೇಮ್‌-2 ಯೋಜನೆ ಅಡಿಯಲ್ಲಿ 50 ಅಂತರ್‌ ನಗರ ಹವಾನಿಯಂತ್ರಿತ ವಿದ್ಯುತ್‌ ಚಾಲಿತ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಿದೆ ಎಂದು ರಾಮು ಲು ಹೇಳಿದರು. ಈ ವೇಳೆ 1,013 ಸಿಬ್ಬಂದಿಯ ಅಂತರ ನಿಗಮ ವರ್ಗಾವಣಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಸಾಂಕೇತಿಕವಾಗಿ ಸಚಿವ ಶ್ರೀರಾಮುಲು 3 ಸಿಬ್ಬಂದಿಗೆ ವರ್ಗಾವಣಾ ಪತ್ರ ನೀಡಿದರು. ಜತೆಗೆ ನಿಗಮದ ಕಾರ್ಯ ಚಟುವಟಿಕೆ ಒಳಗೊಂಡ “ಸಾರಿಗೆ ಸಂಪದ’ ಆಂತರಿಕ ನಿಯತಕಾಲಿಕೆ ಬಿಡುಗಡೆಗೊಳಿಸಲಾಯಿತು.

ಎಲೆಕ್ಟ್ರಿಕ್‌ ಬಸ್‌ ವಿಶೇಷತೆ
ಎಂಇಐಎಲ್‌ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ರಸ್ತೆಗಿಳಿಸುತ್ತಿರುವ ಪರಿಸರ ಸ್ನೇಹಿ “ಇವಿ ಪವರ್‌ ಪ್ಲಸ್‌’ ಬಸ್‌ ಎರಡೂವರೆ ತಾಸು ಚಾರ್ಜ್‌ ಮಾಡಿದರೆ 300 ಕಿ.ಮೀ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದೆ. ಬಸ್‌ನಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ನೂತನ ತಂತ್ರಜ್ಞಾನವಾದ ರಿ ಜನರೇಷನ್‌ ಸಿಸ್ಟಮ್‌ ಅಳವಡಿಕೆ ಮಾಡಲಾಗಿದೆ.

ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿಚಾರ್ಜ್‌ ಆಗುವ ರಿ ಜನರೇಷನ್‌ ಆಗುವ ಸಿಸ್ಟಮ್‌ ಇದಾಗಿದೆ. ಬಸ್‌ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್‌ ಚಾರ್ಜಿಂಗ್‌ ಸ್ಪಾಟ್‌, ಮನರಂಜನೆಗಾಗಿ 2 ಟಿವಿ ಅಳವಡಿಸಲಾಗಿದೆ. ಒಟ್ಟಾರೆ ಬಸ್‌ 43 + 2 ಸೀಟಿಂಗ್‌ ಕೆಪಾಸಿಟಿ ಹೊಂದಿದೆ. ಬಸ್‌ ಸಂಪೂರ್ಣ ಸೆನ್ಸಾರ್‌ ಹಿಡಿತದಲ್ಲಿ ಇರಲಿದೆ. ಫ್ರಂಟ್‌ ಲಾಗ್‌ ಬ್ಯಾಕ್‌ ಲಾಗ್‌ ಕ್ಯಾಮೆರಾ ವ್ಯವಸ್ಥೆ ಇರಲಿದೆ.

ನಮ್ಮ ಇಲಾಖೆಯಲ್ಲಿರುವ ಆಧುನಿಕ ಬಸ್‌ಗಳನ್ನು ನೋಡಿದರೆ ನಮ್ಮ ಸಾಧನೆ ಏನು ಎಂಬುದು ಗೊತ್ತಾಗಲಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಈ ಮಾದರಿಯ ಬಸ್‌ಗಳು ಬಂದಿರಲಿಲ್ಲ. ಅವರು ರೈಲು ಬಿಡುವ ಕೆಲಸ ಮಾಡುತ್ತಿದ್ದರು.