ಬಂಗಾಳದಲ್ಲಿ ಗಲಭೆ ಮಾಡಲು 'ಬಿಜೆಪಿ' ಬಿಹಾರದಿಂದ ಗೂಂಡಾಗಳನ್ನು ನೇಮಿಸಿದೆ ; ಸಿಎಂ ಬ್ಯಾನರ್ಜಿ ಆರೋಪ
ನವದೆಹಲಿ :ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಬಿಜೆಪಿ ಜನರನ್ನು ನೇಮಿಸಿಕೊಳ್ಳುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪೂರ್ವ ಮಿಡ್ನಾಪುರದ ಖೇಜೂರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮನವಮಿ ಮೆರವಣಿಗೆ ವೇಳೆ ಹೌರಾ ಮತ್ತು ಹೂಗ್ಲಿ ಘರ್ಷಣೆಯಲ್ಲಿ ನಡೆದ ಹಿಂಸಾಚಾರ ಕುರಿತಂತೆ ಸಿಎಂ ಬ್ಯಾನರ್ಜಿಯವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯಾವಾಗ ಮತ್ತು ಎಲ್ಲಿ ಹೋಗಿ ಗಲಭೆಗಳನ್ನು ಸೃಷ್ಟಿಸುತ್ತದೆ ಎಂಬುದರ ಕುರಿತು ನಿಗಾ ಇಡಬೇಕಾಗಿತ್ತು. ಬಂಗಾಳದ ಜನರು ಗಲಭೆಗಳನ್ನು ಇಷ್ಟಪಡುವುದಿಲ್ಲ. ಇಲ್ಲಿನ ಜನಸಾಮಾನ್ಯರು ಗಲಭೆ ಮಾಡುವುದಿಲ್ಲ. ಬಿಜೆಪಿಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅವರು ಗಲಭೆಗಳನ್ನು ಪ್ರಚೋದಿಸಲು ಜನರನ್ನು ನೇಮಿಸಿಕೊಳ್ಳುತ್ತಾರೆ ಎಂದು ಬ್ಯಾನರ್ಜಿ ಗುಡುಗಿದರು.
ಬಿಹಾರದಿಂದ ಪುಂಡರನ್ನು ಕರೆತರುತ್ತಿದ್ದಾರೆ. ಅವರು ಬುಲ್ಡೋಜರ್ಗಳು, ಟ್ರಾಕ್ಟರ್ಗಳು ಮತ್ತು ಬಂದೂಕುಗಳೊಂದಿಗೆ ಹೌರಾವನ್ನು ಪ್ರವೇಶಿಸಿದರು. ಹಲವು ಮನೆಗಳಿಗೆ ಬೆಂಕಿ ಹಚ್ಚಿದರು. ಅವರಿಗೆ ಮೆರವಣಿಗೆ ಮಾಡಲು ಪೊಲೀಸ್ ಅನುಮತಿ ಇರಲಿಲ್ಲ ಎಂದು ಹೇಳಿದ್ದಾರೆ.
ಹಿಂಸಾಚಾರವನ್ನು ಪ್ರಚೋದಿಸುವ ಈ ಜನರಿಗೆ ಯಾವುದೇ ಧರ್ಮವಿಲ್ಲ. ಇದು ಯಾವ ರೀತಿಯ ಧರ್ಮ? ಬಿಜೆಪಿಯ ಗೂಂಡಾಗಳು , ಹಿಂದೂಗಳು ಅಥವಾ ಮುಸ್ಲಿಮರು ಅಲ್ಲ ಎಂದೇನಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳವು ಹಲವಾರು ಹಿಂದೂ ಹಬ್ಬಗಳನ್ನು ಆಚರಿಸುತ್ತದೆ. ಎಂದಿಗೂ ಗೂಂಡಾಗಿರಿ ನಡೆದಿಲ್ಲ.. ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರವನ್ನು ಆಯೋಜಿಸುವ ಮೂಲಕ ಬಿಜೆಪಿಯು ರಾಮನ ಹೆಸರನ್ನು ಕೆಡಿಸುತ್ತದೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಮೂಲಕ ಹಿಂದೂ ಧರ್ಮಕ್ಕೆ ಚ್ಯುತಿ ತರುತ್ತಿದ್ದಾರೆ. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸುವುದಾಗಿ ಬಿಜೆಪಿ ಹೇಳಿದೆ. ಅವರು ತಮ್ಮ ಗೂಂಡಾಗಳಿಗೆ ಏಕೆ ಹಾಗೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಮನವಮಿ ಹಬ್ಬದಂದು ಪಶ್ಚಿಮ ಬಂಗಾಳದ ಹೌರಾ ಹಾಗೂ ಹೂಗ್ಲಿಯಲ್ಲಿ ಹಿಂಸಾಚಾರ ಬೂಗಿಲೆದ್ದಿತ್ತು. ಜನರು ಕಂಡ ಕಂಡ ವಾಹನಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದಲ್ಲದೆ ಕಲ್ಲು ತೂರಾಟ ನಡೆಸಿದ್ದರು. ಪರಿಣಾಮ ಕೆಲವು ಪೊಲೀಸರು ಗಾಯಗೊಂಡಿದ್ದರು.