ಫೋಟೋ ತೆಗೆದು ದಂಡ ವಿಧಿಸುವುದಕ್ಕೂ ಬ್ರೇಕ್: ಸುಗಮ ಸಂಚಾರಕ್ಕಷ್ಟೇ ಪೊಲೀಸರ ಸೇವೆ ಸೀಮಿತ
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜಧಾನಿಯ ಪ್ರಮುಖ ರಸ್ತೆ, ಸಿಗ್ನಲ್ನಲ್ಲಿ ಸಂಚಾರ ಪೊಲೀಸರು ತಮ್ಮ ಮೊಬೈಲ್ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ದಂಡ ವಿಧಿಸುವುದಕ್ಕೆ ಬ್ರೇಕ್ ಬೀಳಲಿದೆ. ಕೇವಲ ಸುಗಮಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಸೇವೆ ಸೀಮಿತಗೊಳಿಸಲು ಚಿಂತನೆ ನಡೆಯುತ್ತಿದೆ.
ತಮ್ಮದಲ್ಲದ ತಪ್ಪಿಗೂ ಜನರು ಸಂಚಾರ ನಿಯಮ ಉಲ್ಲಂಘನೆ ಕೇಸ್ನಲ್ಲಿ ಸಿಲುಕಿ ದಂಡ ಪಾವತಿ ಅಥವಾ ರದ್ದುಪಡಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡದ ಮೇಲೆ ಶೇ.50 ರಿಯಾಯಿತಿ ನೀಡಿತ್ತು. ದಂಡ ಪಾವತಿಸಲು ಜನರು ತಮ್ಮ ವಾಹನಗಳ ಮೇಲಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ವೇಳೆ ಪೊಲೀಸರಿಂದ ತಪ್ಪುಗಳು ನಡೆದಿರುವುದು ಕಂಡುಬಂದಿದೆ.
ಸಿಗ್ನಲ್ ಮತ್ತು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನಗಳ ಪೋಟೋ ತೆಗೆದು ದಂಡ ವಿಧಿಸುವಾಗ ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಂಡಾಯ ಸಿಕ್ಕ ಸಿಕ್ಕ ವಾಹನಗಳ ಮೇಲೆ ಕೇಸ್ ದಾಖಲಿಸಿದ್ದಾರೆ. ಇದರಿಂದ ತಪುಪ ಮಾಡದ ವಾಹನ ಸವಾರರ ಮೇಲೂ ಕೇಸ್ ದಾಖಲಿಸಿರುವುದು ಕಂಡುಬಂದಿದೆ. ಒಮ್ಮೆ ದಾಖಲಾದ ಪ್ರಕರಣಗಳನ್ನು ರದ್ದುಪಡಿಸಲು ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ಜನರು ದೂರು ರದ್ದು ಪಡಿಸಿಕೊಳ್ಳಬೇಕಾಗುತ್ತಿದೆ.
ತಪ್ಪಾಗಿ ದಾಖಲಾದ ಕೇಸ್ಗಳನ್ನು ರದ್ದುಪಡಿಸು ವಂತೆ ಸಾವಿರಾರು ದೂರು ಬಂದಿವೆ. ಇದರಲ್ಲಿ ಸಂಚಾರ ಪೊಲೀಸರು ಮೊಬೈಲ್ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಕೇಸ್ ದಾಖಲಿಸುವಾಗ ತಪ್ಪಾಗಿ ದಂಡ ವಿಧಿಸಿರುವುದು ಕಂಡುಬಂದಿದೆ. ಉಳಿದಂತೆ 57 ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ದಾಖಲಾಗಿವೆ. ಇದನ್ನು ಸಂಚಾರ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
* ಒಂದೇ ಸಮಯ, ಒಂದೇ ಉಲ್ಲಂಘನೆಗೆ 2-3 ಕೇಸ್
* ಫೋಟೋದಲ್ಲಿ ನಂಬರ್ ಪ್ಲೇಟ್ ಕಾಣದೆ ಇದ್ದಾಗ ತಪ್ಪಾಗಿ ದಾಖಲು
* ವಾಹನ ಮಾಡಲ್ ಬೇರೆಬೇರೆ ಆಗಿದ್ದರೂ ಟ್ರಾಫಿಕ್ ಫೈನ್
* ನಕಲಿ ನಂಬರ್ ಪ್ಲೇಟ್ನಿಂದಲೂ ಅಸಲಿ ವಾರಸುದಾರನಿಗೆ ದಂಡ
ಮತ್ತಷ್ಟು ಕಡೆ ಸಿಸಿ ಕ್ಯಾಮರಾ
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಒಳಗೊಂಡ 250 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ಪಿಆರ್) ಕ್ಯಾಮರಾಗಳು ಮತ್ತು 100 ರೆಡ್ಲೈಟ್ ವಯೋಲೇಷನ್ ಡಿಟೆಕ್ಷನ್ (ಆರ್ಎಲ್ವಿಡಿ) ಕ್ಯಾಮರಾಗಳನ್ನು ನಗರದ ಪ್ರಮುಖ 50 ಜಂಕ್ಷನ್ಗಳಲ್ಲಿ ಅಳವಡಿಸಿದ್ದಾರೆ. ವೇಗ ಮಿತಿ, ಕೆಂಪು ದೀಪ, ಸ್ಟಾಪ್ಲೇನ್, ಹೆಲ್ಮೆಟ್ರಹಿತ, ತ್ರಿಬಲ್ ರೈಡಿಂಗ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಅರ್ಧ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಉಲ್ಲಂಘನೆಗಳನ್ನು ಸ್ವಯಂ ಚಾಲಿತವಾಗಿ ಗುರುತಿಸಲಿವೆ. ವಾಹನದ ನಂಬರ್ ಪ್ಲೇಟ್ ಗುರುತಿಸಿ ವಾರಸುದಾರರ ಮನೆ ವಿಳಾಸಕ್ಕೆ ಇ-ಚಲನ್ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ದಿನಕ್ಕೆ 30 ಸಾವಿರದಂತೆ ವರ್ಷಕ್ಕೆ 1 ಕೋಟಿಯಷ್ಟು ಕೇಸ್ ದಾಖಲಾಗುತ್ತಿವೆ. ಕ್ಯಾಮರಾ ಕಣ್ಣಿಗೆ ವಾಹನಗಳ ನಂಬರ್ ಪ್ಲೇಟ್ ಮತ್ತು ನಿಯಮ ಉಲ್ಲಂಘನೆ ಶೇ.99.99 ನಿಖರವಾಗಿ ಕಂಡರೆ ಮಾತ್ರ ಕೇಸ್ ದಾಖಲಿಸುತ್ತಿದೆ. ಇದರ ಬಗ್ಗೆ ಜನರಿಗೂ ಜಾಗೃತಿ ಮೂಡುತ್ತಿದೆ. ಇದೇ ರೀತಿ ನಗರದಲ್ಲಿ ಮತ್ತಷ್ಟು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತದೆ. ಇದಾದ ಮೇಲೆ ನಿಧಾನವಾಗಿ ಮೊಬೈಲ್ನಲ್ಲಿ ಫೋಟೋ ತೆಗೆದು ಸಂಚಾರ ಪೊಲೀಸರು ದಂಡ ವಿಧಿಸುವುದನ್ನು ನಿಲ್ಲಿಸಲಾಗುತ್ತದೆ. ಆಗ ತಪ್ಪಾಗಿ ವಾಹನಗಳ ಮೇಲೆ ಕೇಸ್ ದಾಖಲಾಗುವುದು ನಿಲ್ಲಲಿದೆ ಎಂದು 'ವಿಜಯವಾಣಿ'ಗೆ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.