ಫೆ 27 ರಂದು ಪ್ರಧಾನಿ ಮೋದಿಯಿಂದ `ಶಿವಮೊಗ್ಗ ವಿಮಾನ ನಿಲ್ದಾಣ' ಉದ್ಘಾಟನೆ
ಶಿವಮೊಗ್ಗ : ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಫೆ.27 ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಸೋಗಾನೆಯ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ವಿಮಾನ ನಿಲ್ದಾಣ ಮತ್ತು ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದ ಸಿದ್ದತೆ ಕುರಿತು ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಸಾರ್ವಜನಿಕರನ್ನು ಸ್ವಾಗತಿಸುತ್ತಿದ್ದು, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 02 ಕಡೆ ಊಟದ ವ್ಯವಸ್ಥೆ ಇದ್ದು ಒಂದೊಂದು ಕಡೆ 100 ಕೌಂಟರ್‍ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ 04 ಕಡೆ ವಿಶಾಲವಾದ ಪ್ರಾಜೆಕ್ಟರ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲ ಸಿದ್ದತೆಗಳೊಂದಿಗೆ ಸೂಕ್ತ ಪೊಲೀಸ್ ಬಂಧೋಬಸ್ತ್ ಮಾಡಲಾಗಿದೆ ಎಂದರು.
ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ವಿವರ:
ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ರೂ.449.22 ಕೋಟಿ ವೆಚ್ಚದಲ್ಲಿ ಎಟಿಆರ್ 72 ರಿಂದ ಏರ್‍ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ ರನ್‍ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣ
ರೂ.995 ಕೋಟಿ ವೆಚ್ಚದಲ್ಲಿ 103 ಕಿ.ಮೀ ಉದ್ದದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಶಂಕುಸ್ಥಾಪನೆ, ರೂ.97.18 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ರೂ.862 ಕೋಟಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಮತ್ತು ರೂ.91.50 ಕೋಟಿ ಮೊತ್ತದ ಕಾಮಗಾರಿ ಲೋಕಾರ್ಪಣೆ
ರೂ.66.44 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್ ನಿರ್ಮಾಣ, ರೂ.96.20 ಕೋಟಿ ವೆಚ್ಚದಲ್ಲಿ ರಾ.ಹೆ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ. ರೂ.56.56 ಕೋಟಿ ವೆಚ್ಚದಲ್ಲಿ ರಾ.ಹೆ 169 ಶಿವಮೊಗ್ಗ-ಮಂಗಳೂರು ರಸ್ತೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ದಿ.
ಒಟ್ಟು ರೂ.896.16 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ, ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ ರೂ.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೂ.2 ಲಕ್ಷ ಲೀಟರ್ ಸಾಮಥ್ರ್ಯದ ಹಾಲು, ಮೊಸಲು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಉದ್ಘಾಟನ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ರೂ.8 ಕೋಟಿ ವೆಚ್ಚಲ್ಲಿ ನಿರ್ಮಿಸಿರುವ ಮ್ಯಾಮ್‍ಕೋಸ್‍ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ನೆರವೇರಿಸುವರು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲ ಕಡೆ ಸಿಸಿ ಕ್ಯಾಮೆಗಳನ್ನು ಅಳವಡಿಸಲಾಗಿದೆ. ಎಲ್ಲ ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯ ಒಳಗೆ ಕಾರ್ಯಕ್ರಮದ ಆವರಣದೊಳಗೆ ಬರಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು.
ಯಾರೂ ಕೂಡ ಕಪ್ಪು ಬಣ್ಣದ ಬಟ್ಟೆ, ಕರ್ಚೀಫ್‍ಗಳನ್ನು ಧರಿಸಿ ಬರುವಂತಿಲ್ಲ. ನೀರಿನ ಬಾಟಲ್, ಹ್ಯಾಂಡ್ ಬ್ಯಾಗ್ ಮತ್ತು ಕಪ್ಪು ಕರ್ಚೀಫ್‍ಗಳನ್ನು ತರುವಂತಿಲ್ಲ. ಮೊಬೈಲ್ ಮತ್ತು ಪರ್ಸ್‍ಗೆ ಮಾತ್ರ ಅವಕಾಶ ಇರುತ್ತದೆ. ಎರಡು ಹಂತದ ತಪಾಸಣೆ ಇರುತ್ತದೆ ಎಂದು ತಿಳಿಸಿದರು.
ಸಾರಿಗೆ ಸಂಚಾರದಲ್ಲಿ ವ್ಯತ್ಯಯ
ಫೆ.27ರಂದು ಭಾರತ ಸರ್ಕಾರದ ಪ್ರಧಾನ ಮಂತ್ರಿಗಳು ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಮಾಡುವುದರಿಂದ ಫೆ. 26 ರ ಮಧ್ಯಾಹ್ನದಿಂದ 27 ರವರೆಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಕ.ರಾ.ರ.ಸಾ.ನಿಗಮದ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ಆಗಮಿಸುವ ಸಲುವಾಗಿ ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 200 ವಾಹನಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗ ಅಧಿಸೂಚನೆ
ಈ ಮಾರ್ಗದಲ್ಲಿ ಸಂಚಾರ ನಿಷೇಧ
ಫೆ.27 ರಂದು ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಹಾಗೂ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು , ವಾಹನಗಳು ಬರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಕೆಳಕಂಡಂತೆ ಶೂನ್ಯ ಸಂಚಾರ ರಸ್ತೆ ಮಾರ್ಗ ಮತ್ತು ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೊರಡಿಸಿದ್ದಾರೆ.
ಶೂನ್ಯ ಸಂಚಾರ ರಸ್ತೆ ಮಾರ್ಗ:
ದಿನಾಂಕ: 26-06-2023 ಮತ್ತು 27-02-2023 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್ ಸರ್ಕಲ್‍ನಿಂದ ಎನ್.ಆರ್.ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್‍ವರೆಗೆ, ಮತ್ತೂರು-ಮಂಡೇನಕೊಪ್ಪ-ಸೋಗಾನೆ ವಿಮಾನ ನಿಲ್ದಾಣದವರೆಗೆ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚಿಸಲಾಗಿದೆ.
ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ (ದಿ: 27-02-2023 ರಂದು ಮಾತ್ರ):
- ಎನ್.ಆರ್.ಪುರದಿಂದ-ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ್-ಹುಣಸೆಕಟ್ಟೆ-ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.
- ಶಿಕಾರಿಪುರ-ಹೊನ್ನಾಳಿ-ದಾವಣಗೆರೆ ಕಡೆಯಿಂದ ಎನ್.ಆರ್.ಪುರಕ್ಕೆ ಹೋಗುವ ವಾಹನಗಳು ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ(ಎನ್.ಟಿ.ರಸ್ತೆ) ಮೂಲಕ ಎನ್.ಆರ್.ಪುರಕ್ಕೆ ಹೋಗುವುದು.
- ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ್-ಗೋಪಾಳ ಸರ್ಕಲ್-ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.
- ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೋಳ ಸರ್ಕಲ್-ಗೋಪಾಳ ಸರ್ಕಲ್-ನ್ಯೂ ಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು.
ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಮಾರ್ಗ (ದಿ: 27-02-2023 ರಂದು ಮಾತ್ರ):
- ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿ ಪಾಸ್ ಹೊಂದಿರುವ ಗಣ್ಯರು ಶಿವಮೊಗ್ಗ ನಗರದಿಂದ ಬೈಪಾಸ್-ಊರಗಡೂರು ಸರ್ಕಲ್-ಸೂಳೆಬೈಲು-ಮತ್ತೂರು ರಸ್ತೆ ಎಡಭಾಗಕ್ಕೆ ತಿರುವು ಪಡೆದುಕೊಂಡು-ಮಂಡೇನಕೊಪ್ಪ ಮುಖಾಂತರ ಸೋಗಾನೆ ವಿಮಾನ ನಿಲ್ದಾಣಕ್ಕೆ ತಲುಪುವುದು.
- ತೀರ್ಥಹಳ್ಳಿ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ತೀರ್ಥಹಳ್ಳಿ ರಸ್ತೆ-ಮುಡುಬ ಬಲಕ್ಕೆ ತಿರುಗಿ ಶಂಕರಪುರ-ಉಂಬ್ಳೇಬೈಲು ಮುಖಾಂತರ ಲಕ್ಕಿನಕೊಪ್ಪ ಸರ್ಕಲ್‍ಗೆ ಬಂದು ಸೇರುವುದರಿಂದ ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‍ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
- ಸಾಗರ, ಶಿಕಾರಿಪುರ, ಸೊರಬ, ಹೊಸನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ್-ಬಿ.ಹೆಚ್.ರಸ್ತೆ-ಎಎ ಸರ್ಕಲ್-ಶಂಕರಮಠ ಸರ್ಕಲ್-ಹೊಳೆಹೊನ್ನೂರು ಸರ್ಕಲ್-ಎಂ.ಆರ್.ಎಸ್ ಸರ್ಕಲ್‍ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‍ಫೋಟ್ ್ ನಡುವೆ ಗುರುತಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
- ಶಿಕಾರಿಪುರ, ಹೊನ್ನಾಳಿ, ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್ ಸರ್ಕಲ್‍ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‍ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
- ಶಿವಮೊಗ್ಗ ನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂಆರ್‍ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏಪ್‍ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು
- ತರೀಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಭದ್ರಾವತಿ ನಗರದ ಕೃಷ್ಣಪ್ಪ ನಗರದ ಕೃಷ್ಣಪ್ಪ ಸರ್ಕಲ್‍ನಿಂದ ಎಡಕ್ಕೆ ತಿರುಗಿ-ಹಿರಿಯೂರು ಸರ್ಕಲ್-ತಾರೀಕಟ್ಟೆ ಸರ್ಕಲ್-ಹೆಚ್.ಕೆ.ಜಂಕ್ಷನ್-ಲಕ್ಕಿನಕೊಪ್ಪ ಸರ್ಕಲ್‍ಗೆ ಬಂದು ಸೇರುವುದು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‍ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಎಂದು ತಿಳಿಸಿದ್ದಾರೆ