ಪ್ರಧಾನಿ ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು: ಸಿಧು ವ್ಯಂಗ್ಯ

ಚಂಡೀಗಢ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ 15 ನಿಮಿಷ ಸಮಸ್ಯೆ ಎದುರಿಸಿದ್ದರು. ಆದರೆ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನ ಮಂತ್ರಿ ಸಾಹೇಬರ ಬಳಿ ಕೇಳು ಬಯಸುತ್ತಿದ್ದೇನೆ. ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದರು. ಒಂದೂವರೆ ವರ್ಷ ಅಲ್ಲಿಯೇ ಮೊಕ್ಕಾಂ ಹೂಡಿದ್ದರು, ಈ ಬಗ್ಗೆ ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ, ಆದರೆ, ನೀವು 15 ನಿಮಿಷ ಅನುಭವಿಸಿದ್ದ ಸಂಕಷ್ಟ ದೊಡ್ಡ ಸುದ್ದಿಯಾಗಿದೆ. ಈ ರೀತಿಯ ದ್ವಿಮುಖ ಧೋರಣೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಕೊಟ್ಟ ಮಾತಿನಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬದಲು ಪ್ರಧಾನಿ ಮೋದಿ ರೈತರ ಬಳಿಯಿದ್ದ ಅಲ್ಪಸ್ವಲ್ಪ ಆದಾಯವನ್ನು ಕಸಿದುಕೊಂಡಿದ್ದಾರೆ. ಫಿರೋಜ್‌ಪುರದಲ್ಲಿ ಮೋದಿ ಭಾಷಣ ಮಾಡಲಿದ್ದ ಬಿಜೆಪಿ ರ್ಯಾಲಿಗೆ ಕೇವಲ 500 ಮಂದಿ ಮಾತ್ರ ಬಂದಿದ್ದರು. ನಾಚಿಕೆಯಿಲ್ಲದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಖಾಲಿ ಖುರ್ಚಿಗಳ ನಡುವೆಯೂ ಭಾಷಣ ಮಾಡಿದ್ದರು. ಆದರೆ, ಪ್ರಧಾನಿ ಮೋದಿ ಅವರ ಹಾಗಲ್ಲ. ರ್ಯಾಲಿಯಿಂದ ದೂರ ಉಳಿಯಲು, ಮಾಧ್ಯಮಗಳ ಗಮನ ಸೆಳೆಯರು ಭದ್ರತಾ ಲೋಪ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯು ಪಂಜಾಬ್ ನಲ್ಲಿ ಬಿಜೆಪಿಯ ವೈಫಲ್ಯತೆಯನ್ನು ತೋರಿಸುತ್ತಿದೆ. ಬಿಜೆಪಿ ಒಡೆದ ಬಲೂನ್ ನಂತಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ, ಬಿಜೆಪಿಯ ಫಿರೋಜ್‌ಪುರ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿಲ್ಲ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ರ್ಯಾಲಿ ಸ್ಥಳಕ್ಕೆ ಪಕ್ಷದ ಕಾರ್ಯಕರ್ತರು ತಲುಪದಂತೆ ನೋಡಿಕೊಳ್ಳುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು ಆರೋಪಿಸಿದ್ದಾರೆ.
ಬಿಜೆಪಿಗೆ ಜನಬೆಂಬಲ ಸಿಗಬಹುದು ಎಂಬ ಭಯದಿಂದ ಸರ್ಕಾರ ಉದ್ದೇಶಪೂರ್ವಕವಾಗಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡದಂತೆ ಪ್ರಧಾನಿಯನ್ನು ತಡೆಯುತ್ತಿದೆ. "ಫಿರೋಜ್‌ಪುರ ರ್ಯಾಲಿಯಲ್ಲಿ ಕುರ್ಚಿಗಳು ಖಾಲಿಯಾಗಿದ್ದವು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಎದುರಿಸಿದ ಅಡೆತಡೆಗಳ ನಡುವೆಯೂ ಸಾವಿರಾರು ಜನರು ರ್ಯಾಲಿ ಸ್ಥಳಕ್ಕೆ ತಲುಪಿದ್ದರು. ಕಾರ್ಯಕರ್ತರಿದ್ದ ನಮ್ಮ ಬಸ್‌ಗಳನ್ನು ಹಲವು ಸ್ಥಳಗಳಲ್ಲಿ ಯಾವ ಕಾರಣಕ್ಕೆ ನಿಲ್ಲಿಸಲಾಗಿತ್ತು. ಇದನ್ನು ನೀವು ಸರ್ಕಾರವನ್ನೇ ಪ್ರಶ್ನಿಸಬೇಕು? ಎಂದು ಹೇಳಿದ್ದಾರೆ.