ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಭವನ: ಸಿ.ಎಂ ಬೊಮ್ಮಾಯಿ

ಹುಬ್ಬಳ್ಳಿ: 'ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಭವನ ನಿರ್ಮಿಸಿ, ಕಾರ್ಮಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಕೃಷ್ಣನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಮಿಕ ಭವನ ಕಟ್ಟಡ ಉದ್ಘಾಟನೆ, ಸಂಚಾರಿ ಚಿಕಿತ್ಸಾ ಘಟಕ( ಶ್ರಮಿಕ್ ಸಂಜೀವಿನಿ-ಆಂಬುಲೆನ್ಸ್)ಕ್ಕೆ ಚಾಲನೆ ನೀಡಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
'ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಕಾರ್ಮಿಕ ಭವನ ಕಟ್ಟಡ ನಿರ್ಮಿಸಲಾಗಿದ್ದು, ಹುಬ್ಬಳ್ಳಿಯ ಈ ಭವನ ಒಂಬತ್ತನೇಯದು. ಹೀಗೆ ಪ್ರತಿ ಜಿಲ್ಲೆಯಲ್ಲೂ ಭವನ ನಿರ್ಮಿಸಿ, ಒಂದೇ ಕಟ್ಟದಲ್ಲಿ ಕಾರ್ಮಿಕರಿಗೆ ಅಗತ್ಯವಿರುವ ಕಾರ್ಮಿಕ ನ್ಯಾಯಾಲಯ ಸೇರಿದಂತೆ ಎಲ್ಲ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೂಪಿಸಿರುವ ಸಂಚಾರಿ ಚಿಕಿತ್ಸಾ ಘಟಕದ ಆಂಬುಲೆನ್ಸ್ ಆಧುನಿಕ ವೈದ್ಯಕೀಯ ಪರಿಕರಗಳನ್ನು ಒಳಗೊಂಡಿದೆ. ಪ್ರಥಮ ಚಿಕಿತ್ಸಾ ಸೇವೆಗಳು, ರಕ್ತ ಹಾಗೂ ಮೂತ್ರ ಪರೀಕ್ಷೆ ಪ್ರಯೋಗಾಲ, ಜೀವನಾವಶ್ಯಕ ಔಷಧಗಳು, ಇಸಿಜಿ ಸೌಲಭ್ಯಗಳನ್ನು ಸಹ ಹೊಂದಿದೆ. ಮುಂದಿನ ಬಜೆಟ್'ನಲ್ಲಿ ಸಂಚಾರಿ ಕ್ಲೀನಿಕ್ ಆಂಬುಲೆನ್ಸ್'ಗೆ ಹೆಚ್ಚಿನ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
Koo App "ಕಾರ್ಮಿಕ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದ 9 ಕಡೆಗಳಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಿ, ಕಾರ್ಮಿಕರಿಗೆ ಬೇಕಾದ ಸಕಲ ಅನುಕೂಲಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ. ಕಾರ್ಮಿಕರ ನೆರವಿಗೆ ಎಲ್ಲ ಸವಲತ್ತುಗಳಿರುವ ಆಂಬ್ಯುಲೆನ್ಸ್ ಅನ್ನು ಕೂಡ ಇಂದು ಲೋಕಾರ್ಪಣೆ ಮಾಡಲಾಗಿದೆ": ಮುಖ್ಯಮಂತ್ರಿ
ಸಚಿವರಾದ ಶಿವರಾಮ ಹೆಬ್ಬಾರ್, ಸಿ.ಸಿ. ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ಎಸ್.ಟಿ. ಸೋಮಶೇಖರ್, ಆನಂದ್ ಸಿಂಗ್, ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ, ಕಾರ್ಮಿಕ ಆಯುಕ್ತ ಅಕ್ರಮ್ ಪಾಷ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಅಧಿಕಾರಿಗಳಾದ ಗುರುಪ್ರಸಾದ ಎಂ.ಪಿ.,ವೆಂಕಟೇಶ ಶಿಂದಿಹಟ್ಟಿ, ಶ್ವೇತಾ ಎಸ್. ಇದ್ದರು.
₹7.05 ಕೋಟಿ ವೆಚ್ಚದ ಕಾರ್ಮಿಕ ಭವನ
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 21 ಗುಂಟೆ ಜಾಗೆಯಲ್ಲಿ ₹7.05 ಕೋಟಿ ವೆಚ್ಚದಲ್ಲಿ ಮೂರು ಮಹಡಿಗಳ ಕಾರ್ಮಿಕ ಭವನ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ಕಾರ್ಮಿಕ ಉಪ ವಿಭಾಗಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ.