ಪುರಸಭೆಗಳಿಗೆ ಅನುದಾನ ಬಿಡುಗಡೆ
ಬೆಂಗಳೂರು, ಸೆ. ೧೩- ಅಮೃತ ನಗರೋತ್ಥಾನ ಹಂತ-೪ ಯೋಜನೆಯಡಿ ಪುರಸಭೆಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ವಿಧಾನಪರಿಷತ್‌ನಲ್ಲಿಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿನ ಸಮಿತಿ ಯಾವ ಯಾವ ಪುರಸಭೆ ಹಾಗೂ ನಗರಸಭೆಗಳಿಗೆ ಅನುದಾನ ನೀಡಬೇಕು ಎನ್ನುವುದನ್ನು ಪಟ್ಟಿ ಮಾಡಿ ನೀಡಲಾಗಿದೆ. ಅದರಂತೆ ರಾಜ್ಯ ಸಮಿತಿ ಪರಿಶೀಲಿಸಿ ಅನುಮತಿ ನೀಡಲಿದೆ ಎಂದು ಹೇಳಿದರು.
ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯ ಜಿಲ್ಲೆಯ ನಾಗಮಂಗಲ ಪುರಸಭೆಗೆ ೧೨ ವಾರ್ಡ್‌ಗಳಿಗೆ ೧೦ ಕೋಟಿ ಅನುದಾನ ನೀಡಲಾಗಿದೆ. ಇನ್ನುಳಿದ ೧೧ ವಾರ್ಡ್‌ಗಳಿಗೆ ಅನುದಾನ ನೀಡಿಲ್ಲ ಎನ್ನುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪುರಸಭೆಗಳಲ್ಲಿ ಯಾವುದೇ ಕ್ರಿಯಾ ಯೋಜನೆ ತಯಾರಾದರೂ ಅದನ್ನು ಜಿಲ್ಲಾ ಮಟ್ಟದ ಸಮಿತಿ ಶಿಫಾರಸ್ಸಿನಂತೆ ಯೋಜನೆ ರೂಪಿಸಲಾಗುವುದು. ಇದರಲ್ಲಿ ಅಧಿಕಾರಿಗಳು, ಶಾಸಕರ ಪಾತ್ರ ಇರುವುದಿಲ್ಲ ಎಂದು ಹೇಳಿದರು.
ಕ್ರಿಯಾಯೋಜನೆ ತಯಾರಿಸುವಲ್ಲಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಎದುರಾಗಿಲ್ಲ. ಹೀಗಾಗಿ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವೂ ಇಲ್ಲ ಎಂದು ಹೇಳಿದರು.ನಾಗಮಂಗಲ ಪುರಸಭಾ ವ್ಯಾಪ್ತಿಯ ಅಮೃತ ನಗರೋತ್ಥಾನ-೪ ಯೋಜನೆಯಡಿ ೬೯೮.೩೯ ಲಕ್ಷ ರೂ.ಗಳನ್ನು ೧೨ ಕಾಮಗಾರಿಗಳಿಗೆ ಕ್ರಿಯಾಯೋಜನೆ ಅನುಮೋದನೆ ನೀಡಿದೆ ಎಂದರು.
ಮಧ್ಯಪ್ರವೇಶಿಸಿದ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸದಸ್ಯರಾಗಿರುವ ಸಮಿತಿ ಪರಿಶೀಲಿಸಿ ಕ್ರಿಯಾಯೋಜನೆ ತಯಾರಿಸುತ್ತದೆ. ಇಂತಹ ಕ್ರಿಯಾಯೋಜನೆಗೆ ಜಿಲ್ಲಾ ಸಮಿತಿ ಅನುಮೋದನೆ ನೀಡಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಿ ಸಚಿವರಿಗೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಗೂಳಿಗೌಡ, ನಾಗಮಂಗಲ ಪುರಸಭೆಗೆ ಈ ಅಮೃತಯೋಜನೆಯಡಿ ೧೦ ಕೋಟಿ ರೂ. ಅನುದಾನ ನೀಡಿದ್ದು, ಅದನ್ನು ೧೨ ವಾರ್ಡ್‌ಗಳಿಗಷ್ಟೇ ಬಳಸಲಾಗುತ್ತಿದೆ. ಉಳಿದ ವಾರ್ಡ್‌ಗಳಿಗೆ ನೀಡಿಲ್ಲ. ಹೀಗಾಗಿ ೨೩ ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.