ಪಾಂಡವಪುರ| ನೆಲಕ್ಕುರುಳಿದ ವಿದ್ಯುತ್ ಕಂಬ: ವ್ಯಕ್ತಿಗೆ ಗಾಯ
ಪಾಂಡವಪುರ: ನೂತನವಾಗಿ ಅಳವಡಿಸಿದ್ದ 11 ಕೆ.ವಿ.ವಿದ್ಯುತ್ ಕಂಬಗಳು ನೆಲಕ್ಕುರುಳಿದಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ವಿಶ್ವೇಶ್ವರಯ್ಯನಗರದಲ್ಲಿ ನಡೆದಿದೆ.
ತಾಲ್ಲೂಕಿನ ಎಂ.ಬೆಟ್ಟಹಳ್ಳಿಯ ಮಹೇಂದ್ರ (27) ಗಾಯಗೊಂಡವರು.
ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದಾಗ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಟ್ರಿಪ್ ಆಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ ಘಟನೆ ತಿಳಿಯದ ಸೆಸ್ಕ್ ಲೈನ್‌ಮ್ಯಾನ್‌ಗಳು ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಮಹೇಂದ್ರ ಅವರನ್ನು ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಲೈನ್ ಹಾದುಹೋಗಿದ್ದ ಪಕ್ಕದಲ್ಲೇ ಚರಂಡಿಗಾಗಿ ನೆಲ ಅಗೆದಿದ್ದರಿಂದ ಕಂಬಗಳು ನೆಲಕ್ಕೆ ಉರುಳಿವೆ. ವಿಷಯ ತಿಳಿಯುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ ತಿಳಿಸಿದರು.
ವಿದ್ಯುತ್ ಕಂಬ ಅಳವಡಿಸುವಾಗ ಗುಂಡಿ ತೋಡಿ ಕಾಂಕ್ರೀಟ್ ಹಾಕಿ ನಿಲ್ಲಿಸಿದ್ದರೆ ವಿದ್ಯುತ್ ಕಂಬಗಳು ಉರು ಳುತ್ತಿರಲಿಲ್ಲ. ಆದರೆ, ಒಂದೆರಡು ಅಡಿಯಷ್ಟು ಗುಂಡಿ ತೋಡಿ ಅಳವಡಿಸಿ ದ್ದರಿಂದ ಕಂಬಗಳು ನೆಲಕ್ಕುರುಳಿವೆ. ಇದು ಕಳಪೆ ಕಾಮಗಾರಿಯಾಗಿದ್ದು, ಗುತ್ತಿಗೆದಾರರು ಕೆಲಸ ಮಾಡುವ ವೇಳೆ ಸೆಸ್ಕ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇಲ್ಲದೆ ಇದ್ದರೆ ಇಂಥ ಅನಾಹುತಗಳು ನಡೆಯುತ್ತಲೇ ಇರುತ್ತವೆ ಎಂದು ಸ್ಥಳೀಯರು ಆರೋಪಿಸಿದರು.