ಪರಿಹಾರ ವಿಳಂಬ, ಎಂಜಿನಿಯರ್‌ಗಳೇ ಹೊಣೆ: ತುಷಾರ್‌ ಗಿರಿನಾಥ್‌ ಎಚ್ಚರಿಕೆ

ಪರಿಹಾರ ವಿಳಂಬ, ಎಂಜಿನಿಯರ್‌ಗಳೇ ಹೊಣೆ: ತುಷಾರ್‌ ಗಿರಿನಾಥ್‌ ಎಚ್ಚರಿಕೆ

ಬೆಂಗಳೂರು: 'ಬಿಬಿಎಂಪಿಯ ಎಲ್ಲ ವಲಯದ ಆಯುಕ್ತರು ಮಧ್ಯಾಹ್ನದ ನಂತರ ಕಚೇರಿಯಲ್ಲಿ ಹಾಜರಿದ್ದು, ನಾಗರಿಕರ ಸಮಸ್ಯೆಗಳನ್ನು ಆಲಿಸಬೇಕು. ಈ ಸಮಸ್ಯೆಗಳು ನಿವಾರಣೆಯಾಗದಿದ್ದರೆ ವಿಭಾಗೀಯ ಮಟ್ಟದ ಎಂಜಿನಿಯರ್‌ಗಳನ್ನೇ ನೇರಹೊಣೆ ಮಾಡಲಾಗುತ್ತದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬೆಂಗಳೂರು ವಾರ್ಡ್ ಸಮಿತಿ ಬಳಗ ಆಯೋಜಿಸಿದ್ದ 'ಬೆಂಗಳೂರು ವಾರ್ಡ್ ಸಮಿತಿ ಬಳಗ ಸಮಾವೇಶ'ದಲ್ಲಿ ಭಾನುವಾರ ಅವರು ಮಾತನಾಡಿದರು.

'ವಾರ್ಡ್‌ ಸಮಿತಿ ಸಭೆಗಳಲ್ಲಿ ನಾಗರಿಕರು ಭಾಗವಹಿಸಬೇಕು ಎಂದು ವಿನಂತಿಸುತ್ತೇನೆ. ತ್ಯಾಜ್ಯ ವಿಂಗಡಣೆ, ಪೌರಕಾರ್ಮಿಕರ ಕಲ್ಯಾಣ, ಬೀದಿ ದೀಪಗಳು ಹಾಗೂ ಉದ್ಯಾನಗಳ ಸ್ಥಿತಿ ನೋಡಿದರೆ ಆ ವಾರ್ಡ್‌ನ ಸ್ವಚ್ಛತಾ ಗುಣಮಟ್ಟ ತಿಳಿಯುತ್ತದೆ' ಎಂದರು.

ಈ ಸಭೆಯಲ್ಲಿ ಹಲವಾರು ನಾಗರಿಕ ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಾದ ಜನಾಗ್ರಹ, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ, ಸೆನ್ಸಿಂಗ್ ಲೊಕೇಲ್, ಚೇಂಜ್ ಮೇಕರ್ಸ್, ಕನಕಪುರ, ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್, ವೈಟ್‌ಫೀಲ್ಡ್‌ ರೈಸಿಂಗ್, ಸಿಟಿಜನ್ಸ್ ಫಾರ್ ಬೆಂಗಳೂರು, ಸಿಟಿಜನ್ ಪಾರ್ಟಿಸಿಪೇಷನ್ ಪ್ರೋಗ್ರಾಂ, ಎಪಿಎಸ್‌ಎ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸರ್ಕಾರಿ ಕಲಾ ಕಾಲೇಜಿನ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

'ವಾರ್ಡ್ ಸಮಿತಿ ಸಭೆಗಳ ಗುಣಮಟ್ಟವನ್ನು ಹೇಗೆ ನಾವು ಇನ್ನು ಉತ್ತಮ ಮಟ್ಟದಲ್ಲಿ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಮುಖ್ಯ ಆಯುಕ್ತರ ಗಮನಕ್ಕೆ ತರಲು ಕ್ರಮಕೈಗೊಳ್ಳಲಾಯಿತು' ಎಂದು ಜನಾಗ್ರಹ ಸಿಟಿಜನ್‌ಶಿಪ್ ಆಯಂಡ್‌ ಡೆಮಾಕ್ರಸಿ ಸಂಸ್ಥೆಯ ವ್ಯವಸ್ಥಾಪಕ ಹಂಪಾಪುರ ಎಲ್. ಮಂಜುನಾಥ ಹೇಳಿದರು.

'ಪ್ರತಿಯೊಬ್ಬ ನಾಗರಿಕರು ವಾರ್ಡ್ ಸಮಿತಿಗಳಲ್ಲಿ ಭಾಗವಹಿಸಿ, ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡಲು ನಾನು ವಿನಂತಿಸುತ್ತೇನೆ' ಎಂದು ಬಿ.ಕ್ಲಿಪ್‌ನ ರಾಘವೇಂದ್ರ ಎಚ್.ಎಸ್ ಬಿ. ಹೇಳಿದರು.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ಬಳಗವು ಅಂಗೀಕರಿಸಿದ ನಿರ್ಣಯಗಳನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ಕಳುಹಿಸಿದ್ದು, ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸುತ್ತೇವೆ ಜನಾಗ್ರಹ ಸಂಸ್ಥೆಯ ನಾಗರಿಕರ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಹೇಳಿದರು.

ಸಮಾವೇಶದ ನಿರ್ಣಯಗಳು

l ಬಿಬಿಎಂಪಿ ಚುನಾವಣೆ ಮುಗಿದ ಮೂರು ತಿಂಗಳಲ್ಲಿ ವಾರ್ಡ್‌ ಸಮಿತಿ ರಚಿಸಬೇಕು. ನಾಮನಿರ್ದೇಶನದ ಬದಲಿಗೆ ಸಾರ್ಟೇಷನ್‌ ವಿಧಾನ
ಅಳವಡಿಸಿಕೊಳ್ಳಬೇಕು.

l ತ್ಯಾಜ್ಯ ನಿರ್ವಹಣೆ, ರಸ್ತೆ, ಪಾದಚಾರಿ ಮಾರ್ಗ, ಬೀದಿದೀಪ, ಕೆರೆಗಳ ಮೇಲೆ ನಿಗಾವಹಿಸಲು ವಾರ್ಡ್‌ ಸಮಿತಿ ಸಲಹೆ ಪಾಲಿಸಬೇಕು.

l ಬಜೆಟ್‌, ಬಜೆಟ್‌ ಹಂಚಿಕೆಯಲ್ಲಿ ನಾಗರಿಕರನ್ನು ಸಕ್ರಿಯವಾಗಿ ಭಾಗಿ ಮಾಡಿಕೊಳ್ಳಬೇಕು. ವಾರ್ಡ್‌ ಸಮಿತಿ ನಿರ್ಣಯಗಳನ್ನು ಜಾರಿಗೊಳಿಸಬೇಕು. ಎಲ್ಲ ಇಲಾಖೆಯೊಂದಿಗೆ ಮಾಸಿಕ ಸಭೆ ನಡೆಸಬೇಕು.

l ಪ್ರತಿ ಮೊದಲ ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸಬೇಕು. ಚುನಾಯಿತ ಪಾಲಿಕೆ ಸದಸ್ಯರೇ ಈ ಸಮಿತಿ ಅಧ್ಯಕ್ಷರಾಗಿರಬೇಕು.

ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.