ಮುಷ್ಕರ, ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ: ನೌಕರರಿಗೆ ಸರ್ಕಾರದ ಎಚ್ಚರಿಕೆ
ನವದೆಹಲಿ: ಯಾವುದೇ ಪ್ರತಿಭಟನೆ ಅಥವಾ ಮುಷ್ಕರಗಳಲ್ಲಿ ಭಾಗವಹಿಸದಂತೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ನೌಕರರಿಗೆ ಸೂಚಿಸಿದ್ದು, ಪಾಲ್ಗೊಂಡರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಒತ್ತಾಯಿಸಿ ಜಂಟಿ ವೇದಿಕೆಯ ಅಡಿಯಲ್ಲಿ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಳ್ಳಲು, ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು(ಎನ್‌ಜೆಸಿಎ) ಚಿಂತನೆ ನಡೆಸಿರುವ ಕಾರಣ ಸರ್ಕಾರವು ಈ ಎಚ್ಚರಿಕೆ ನೀಡಿದೆ.
ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಈ ಆದೇಶ ನೀಡಿದೆ.
'ಮುಷ್ಕರ ನಡೆಸಲು ನೌಕರರಿಗೆ ಅಧಿಕಾರ ಇದೆ ಎಂದು ಶಾಸನಬದ್ಧವಾಗಿ ಎಲ್ಲೂ ಹೇಳಿಲ್ಲ. ಮುಷ್ಕರ ನಡೆಸುವುದು ದುರ್ನಡತೆ ಎಂದು ಸುಪ್ರೀಂ ಕೋರ್ಟ್ ಕೂಡ ತನ್ನ ಹಲವು ಆದೇಶಗಳಲ್ಲಿ ಒಪ್ಪಿಕೊಂಡಿದೆ' ಎಂದೂ ಈ ಆದೇಶದಲ್ಲಿ ಹೇಳಲಾಗಿದೆ.
ಯಾವುದೇ ನೌಕರ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ವೇತನ ಕಡಿತ ಸೇರಿದಂತೆ ಶಿಸ್ತುಕ್ರಮ ಎದುರಿಸಬೇಕಾಗಬಹುದು ಎಂದೂ ಎಚ್ಚರಿಕೆ ನೀಡಿದೆ.