ನೆಹರೂರನ್ನು ಹೊಗಳಿದ ವರುಣ್‌ ಗಾಂಧಿ ಕಾಂಗ್ರೆಸ್‌ನತ್ತ?

ನೆಹರೂರನ್ನು ಹೊಗಳಿದ ವರುಣ್‌ ಗಾಂಧಿ ಕಾಂಗ್ರೆಸ್‌ನತ್ತ?

ಕ್ನೋ: ಬಿಜೆಪಿ ನಾಯಕ, ಉತ್ತರಪ್ರದೇಶದ ಫಿಲಿಬಿತ್‌ ಕ್ಷೇತ್ರದ ಸಂಸದ ವರುಣ್‌ ಗಾಂಧಿ ನಿಧಾನಕ್ಕೆ ಕಾಂಗ್ರೆಸ್‌ನತ್ತ ಹೊರಳಿಕೊಳ್ಳುತ್ತಿದ್ದಾರೆಯೇ? ಅವರ ಇತ್ತೀಚೆಗಿನ ಹೇಳಿಕೆಗಳು ಅಂತಹದ್ದೊಂದು ಸುಳಿವು ನೀಡಿವೆ.

2024ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಪರ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳೂ ಹೇಳಿವೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್‌ ಗಾಂಧಿ-ಮನೇಕಾ ಗಾಂಧಿ ದಂಪತಿಯ ಪುತ್ರ ವರುಣ್‌ಗೆ ಈಗ 42 ವರ್ಷ. ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತನ್ನ ಮುತ್ತಜ್ಜ, ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ, ಸರ್ಕಾರಿ ಸಂಬಳ, ಬಂಗಲೆ, ಕಾರುಗಳನ್ನು ನಿರಾಕರಿಸಿದ್ದರು. ತಾನೂ ಹಾಗೆಯೇ ಮಾಡಿದ್ದೇನೆ ಎಂದಿದ್ದಾರೆ. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

2022ರಲ್ಲಿ ಮಾತನಾಡಿದ್ದ ಅವರು, ಇಂದಿರಾ ಗಾಂಧಿಯನ್ನು ರಾಷ್ಟ್ರಮಾತೆ ಎಂದಿದ್ದರು. ಆದರೆ ಜ.17ಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ, ವರುಣ್‌ ಗಾಂಧಿಯ ಕುರಿತು ಪ್ರೀತಿಯಿದೆ. ನಮ್ಮಿಬ್ಬರ ಸಿದ್ಧಾಂತಗಳು ಪೂರ್ಣ ಬೇರೆಬೇರೆ. ಅವರು ಆರ್‌ಎಸ್‌ಎಸ್‌ ವಿಚಾರಗಳನ್ನು ಅಪ್ಪಿಕೊಂಡಿದ್ದಾರೆ ಎಂದಿದ್ದರು.