ನಮಗೂ ರಾಜಕೀಯ ಮಾಡೋಕೆ ಬರುತ್ತೆ. ಇಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸಿಡಿದೆದ್ದ ಡಿಕೆಶಿ
ದೆಹಲಿ: ಭಾರತ್ ಜೋಡೋ ಯಾತ್ರೆ ನಡುವೆಯೂ ದೆಹಲಿಯ ಇಡಿ(ಜಾರಿ ನಿರ್ದೇಶನಾಲಯ) ಕಚೇರಿಯಲ್ಲಿ ಶುಕ್ರವಾರ ಸತತ ಐದೂವರೆ ತಾಸು ವಿಚಾರಣೆ ಎದುರಿಸಿ ಹೊರಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮಗೂ ರಾಜಕೀಯ ಮಾಡೋಕೆ ಬರುತ್ತೆ ಎನ್ನುತ್ತಾ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಡಿಕೆ ಸಹೋದರರು ಯಂಗ್ ಇಂಡಿಯಾ ಟ್ರಸ್ಟ್ಗೆ ದೇಣಿಗೆ ನೀಡಿದ್ದ ಹಿನ್ನೆಲೆಯಲ್ಲಿ ಅ.7 ರಂದು ವಿಚಾರಣೆಗೆ ಬರುವಂತೆ ಸೆ.23ರಂದೇ ಇವರಿಬ್ಬರಿಗೂ ಇಡಿ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ಸಹೋದರರಿಬ್ಬರೂ ವಿಚಾರಣೆಗೆ ಹಾಜಾಗಿದ್ದರು. ಇಬ್ಬರನ್ನೂ ಇಡಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಎದುರಿಸಿ ಇಡಿ ಕಚೇರಿಯಿಂದ ಹೊರ ಬಂದ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ಬಗೆಗಿನ ದಾಖಲೆ ಕೇಳಿದ್ದಾರೆ. ಈ ಹಿಂದೆಯೇ ಮಾಹಿತಿ ನೀಡಿದ್ದೆ. ಮತ್ತೆ ಕೇಳಿದ್ದಾರೆ. ಎಲ್ಲವನ್ನೂ ಸಲ್ಲಿಸುತ್ತೇವೆ. ರಾಜಕೀಯವನ್ನು ರಾಜಕೀಯ ಅಖಾಡದಲ್ಲಿ ಮಾಡಬೇಕು. ತನಿಖಾ ಸಂಸ್ಥೆ ಕಚೇರಿಗಳಲ್ಲಿ ಅಲ್ಲ. ನಾವೂ ರಾಜಕೀಯ ಮಾಡೋಕೆ ಸಿದ್ಧರಿದ್ದೇವೆ ಎಂದರು.
ಡಿ.ಕೆ.ಸುರೇಶ್ ಮಾತನಾಡಿ, ಯಂಗ್ ಇಂಡಿಯಾ ಟ್ರಸ್ಟ್ಗೆ ಎಪ್ರಿಲ್ ತಿಂಗಳಲ್ಲಿ 25 ಲಕ್ಷ ರೂ. ದೇಣಿಗೆ ನೀಡಿದ್ದೆವು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ತೆರಿಗೆ ನೀಡುವುದು ಬಾಕಿ ಇದ್ದರೆ ನೀಡಲು ನಾವು ಸಿದ್ದ. ಕಳೆದ 10 ವರ್ಷದ ಹಣಕಾಸು ವ್ಯವಹಾರದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಅದನ್ನ ಆನ್ಲೈನ್ ಮೂಲಕ ಸಲ್ಲಿಸುತ್ತೇವೆ. ಯಾವಾಗ ಕರೆಯುತ್ತೇವೋ ಅವಾಗ ಬರಬೇಕು ಅಂದಿದ್ದಾರೆ. ಮುಂದೆ ವಿಚಾರಣೆಗೆ ಕರೆದರೆ ಬರುತ್ತೇವೆ ಎಂದರು.