ನನಗೆ ಯಾವತ್ತೂ ಜಾತಿ ಅಡ್ಡ ಬಂದಿರಲಿಲ್ಲ

ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವರು
ಚುನಾವಣೆಗಳು ಅಂದರೆ ಆಗ ಜನರೇ ಅಭ್ಯರ್ಥಿಗೆ 50 ರೂ.ನಿಂದ 1 ಸಾವಿರ ರೂ.ವರೆಗೆ ಎಲೆ ಅಡಿಕೆಯಲ್ಲಿ ಹಣವಿಟ್ಟು ಕಾಲು ಮುಟ್ಟಿ, ನೀರು ಹಾಕಿ ಆರತಿ ಬೆಳಗಿ ಆಶೀರ್ವಾದ ಮಾಡೋರು. ಈಗ ಅದು “ರಿವರ್ಸ್” ಆಗಿದೆ.
ಆಗಿನ ಚುನಾವಣೆಗಳಲ್ಲಿ ಜನ ಗುಂಪು ಕಟ್ಟಿಕೊಂಡು ಹಿಂಸಾಚಾರಗಳು ನಡೆಯುತ್ತಿದ್ದವು. ಈಗ ಅದು ಸುಧಾರಣೆ ಆಗಿದೆ. ರಾಜ್ಯದಲ್ಲಿ ಚುನಾವಣ ಹಿಂಸಾಚಾರಗಳು ಅತ್ಯಂತ ಕಡಿಮೆಯಾಗಿವೆ. ಚುನಾವಣ ಆಯೋಗ ನಿರ್ಬಂಧ ಹಾಕಿರುವುದರಿಂದ ರಾತ್ರಿ 10 ಗಂಟೆಗೆ ಪ್ರಚಾರ ಅಂತ್ಯಗೊಳ್ಳುತ್ತೆ. ಆಗ ಮುಂಜಾನೆ 2 ಗಂಟೆ, 3 ಗಂಟೆವರೆಗೂ ಪ್ರಚಾರಸಭೆಗಳು ನಡೆಯುತ್ತಿದ್ದವು. ಜನ ನಮಗಾಗಿ ಕಾಯೋರು. ಆಗ ರಾಜಕಾರಣಿಗಳ ಬಗ್ಗೆ ವಿಶ್ವಾಸವಿತ್ತು, ಅವರು ಹೇಳುವುದನ್ನೆಲ್ಲ ನಂಬುತ್ತಿದ್ದರು, ಆದರೆ ಈಗ ನಂಬುವುದಿಲ್ಲ. ಇದು ಆಗಿನ-ಈಗಿನ ಚುನಾವಣೆಗಳಿಗಿರುವ ವ್ಯತ್ಯಾಸಗಳು.
ನನ್ನ ಸ್ವಂತ ದುಡ್ಡು ಅಂತ ಹೇಳಿ ಆಗ ಖರ್ಚು ಮಾಡಿದ್ದು 1 ರಿಂದ 2 ಲಕ್ಷ ಅಷ್ಟೆ. ಜನರೇ ಸಿಕ್ಕಾಪಟ್ಟೆ ಸ್ವಂತ ಹಣ ಖರ್ಚು ಮಾಡೋರು, ಎಲ್ಲರೂ ಸಹಾಯ ಮಾಡಿದರು. ನನಗೆ ಮೊದಲ ಎಲೆಕ್ಷನ್‌ನಲ್ಲಿ ಕರೆಕ್ಟಾಗಿ ಹಳ್ಳಿಗಳೇ ಗೊತ್ತಿರಲಿಲ್ಲ. ಯಾವ ಹಳ್ಳಿ, ಯಾವ ಜಾತಿ ಏನೆಂಬುದೇ ತಿಳಿದಿರಲಿಲ್ಲ. ನನಗೆ ಜಾತಿ ಅನ್ನೋದು ಕೊನೆಯವರೆಗೂ ಗೊತ್ತಾಗಲಿಲ್ಲ. ನಾನು ಕನಕಪುರದಿಂದ 6 ಸಲ ಗೆದ್ದಿದ್ದರೂ ಯಾವತ್ತೂ ಜಾತಿ ಅಡ್ಡ ಬರಲಿಲ್ಲ. ಕ್ಷೇತ್ರ ಮರು ವಿಂಗಡಣೆ ಆಗಿದ್ದರಿಂದ ಬೇರೆ ಕಡೆ ಹೋಗಬೇಕಾಯಿತು.
ಆಗಲೂ “ಇಷ್ಯು” ಇತ್ತು
ಇವೆಲ್ಲದರ ನಡುವೆಯೂ ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಬಹುತೇಕರು ವಿಷಯಾಧಾರಿತದ ಮೇಲೆ ಮತ ಕೊಡುತ್ತಾರೆ. ಇದು ಆಗಲೂ ಅಷ್ಟೇ-ಈಗಲೂ ಅಷ್ಟೇ. ಕರ್ನಾಟಕದಲ್ಲಿ ಮೊದಲನೇ ಕಾಂಗ್ರೆಸ್‌ಯೇತರ ಸರಕಾರವೆಂದರೆ ರಾಮಕೃಷ್ಣ ಹೆಗಡೆ ನಾಯಕತ್ವದ ಜನತಾ ಸರಕಾರ. ಆ Óರಕಾರ ಬರಬೇಕಾದರೆ ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಬಗ್ಗೆ ಬಹಳ ಅಪಪ್ರಚಾರ ನಡೆಯಿತು. ಇವತ್ತಿಗೆ ಹೋಲಿಸಿದರೆ ಆಗ ಅವರು ಮಾಡಿದ್ದು ನಥಿಂಗ್. ಆಗ ಒಂದು ಹೆಲಿಕಾಪ್ಟರ್ ಇಟ್ಟುಕೊಂಡಿದ್ದರು, ಈಗ ನೂರು ಹೆಲಿಕಾಪ್ಟರ್‌ಗಳು ಬಳಕೆಯಾಗುತ್ತಿವೆ. ಒಂದು ಹೆಲಿಕಾಪ್ಟರ್‌ಗೆ ಗುಂಡೂರಾಯರ ಮೇಲೆ ಬಹಳ ಕೆಟ್ಟ ಪ್ರಚಾರ ನಡೆಯಿತು. ಆಮೇಲೆ ಗೋಕಾಕ್ ವರದಿ ಜಾರಿ ವಿಷಯದಲ್ಲೂ ಅವರ ಮಾತುಗಳು ಸರಿ ಹೋಗಲಿಲ್ಲ, ಕನ್ನಡ ಚಳವಳಿ ಹೋರಾಟಗಾರರು, ಕನ್ನಡ ಸಂಘಟನೆಗಳು, ರೈತರು, ದಲಿತ ಸಂಘಟನೆಗಳ ಸಹ ಸರಕಾರದ ವಿರುದ್ಧ ನಿಂತವು. ಗುಂಡೂರಾಯರು ಮತ್ತು ಕಾಂಗ್ರೆಸ್ ವಿರುದ್ಧದ ವಾತಾವರಣ ಸೃಷ್ಟಿಯಾಗಿ ಆ ಪಕ್ಷ ಹಿನ್ನಡೆ ಅನುಭವಿಸಿತು. ವಿಶೇಷವಾಗಿ ಬಂಗಾರಪ್ಪ ಸಹ ಬಂಡಾಯದ ಬಾವುಟ ಹಾರಿಸಿದ್ದರಿಂದ ಜನತಾ ಸರಕಾರ ಬಂತು. ಇದು “ಇಷ್ಯು’ ಮೇಲೆ ನಡೆದ ಚುನಾವಣೆ, ಅನಂತರ 1985 ರಲ್ಲಿ ಹೆಗಡೆ ನಾಯಕತ್ವದಲ್ಲಿ ಚುನಾವಣೆ “ಇಷ್ಯು’ ಮೇಲೆ ನಡೆಯಿತು. ಹೆಗಡೆ ಅವರದು “ಒಳ್ಳೆಯ ಆಡಳಿತ’ ಎಂಬ ವಿಷಯದ ಮೇಲೆ ನಡೆದ ಚುನಾವಣೆ. ಈ ರೀತಿ ಪ್ರತೀ ಚುನಾವಣೆಯೂ ವಿಷಯಾಧಾರಿತದ ಮೇಲೆ ನಡೆಯುತ್ತಿವೆ.
-ಎಂ.ಎನ್.ಗುರುಮೂರ್ತಿ