ದ. ಆಫ್ರಿಕಾ ವಿರುದ್ಧ ಟಿ20 ಕದನಕ್ಕೆ ರವಿ ಶಾಸ್ತ್ರಿ ಆಯ್ಕೆಯ ಟೀಮ್ ಇಂಡಿಯಾ XI ಹೀಗಿದೆ!

India vs South Africa, Team India Playing XI For 1st T20I: ಬಹುತೇಕ ಯುವ ಆಟಗಾರನ್ನು ಹೊಂದಿರುವ ಕೆಎಲ್‌ ರಾಹುಲ್‌ ಸಾರಥ್ಯದ ಟೀಮ್ ಇಂಡಿಯಾ, ಇದೀಗ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಬರೋಬ್ಬಎಇ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲು ಸಜ್ಜಾಗಿದೆ. ಐಪಿಎಲ್‌ 2022 ಟೂರ್ನಿಯಲ್ಲಿ ಮಿಂಚಿದ ಕೆಲ ಯುವ ತಾರೆಯರಿಗೆ ಈ ಸರಣಿಯಲ್ಲಿ ಭಾರತ ತಂಡ ಪರ ಆಡುವ ಅವಕಾಶ ಸಿಕ್ಕಿದೆ. ಈ ನಿಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ಭಾರತ ತಂಡ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಯಾರನ್ನೆಲ್ಲಾ ಆಡಿಸಬೇಕು ಎಂದು ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ದ. ಆಫ್ರಿಕಾ ವಿರುದ್ಧ ಟಿ20 ಕದನಕ್ಕೆ ರವಿ ಶಾಸ್ತ್ರಿ ಆಯ್ಕೆಯ ಟೀಮ್ ಇಂಡಿಯಾ XI ಹೀಗಿದೆ!

ಮುಂಬೈ: ಅನುಭವಿಗಳಿಗೆ ವಿಶ್ರಾಂತಿ ನೀಡಿದರೂ ಸಹ ಪ್ರವಾಸಿ ವಿರುದ್ಧದ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬಲಿಷ್ಠ ತಂಡವನ್ನೇ ರಚನೆ ಮಾಡಿದೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಸಾರಥ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿಯ ಮೊದಲ ಪಂದ್ಯ ಹೊಸದಿಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದಹಾಗೆ 2021ರ ಟಿ20 ವಿಶ್ವಕಪ್‌ ಬಳಿಕ ಮಾಜಿ ಆಲ್‌ರೌಂಡರ್‌ ಅವರ ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದ ಅಧಿಕಾರ ಅವಧಿ ಅಂತ್ಯಗೊಂಡಿತು. ಅವರ ನಂತರ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌ ಹುದ್ದೆ ಅಲಂಕರಿಸಿದ್ದಾರೆ. ಈಗ ದ್ರಾವಿಡ್‌ ಮಾರ್ಗದರ್ಶನದ ಅಡಿಯಲ್ಲಿ ಇದೇ ವರ್ಷ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗಲಿದೆ. ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿ ಮೊದಲ ಹೆಜ್ಜೆಯಾಗಿದೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಈ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿರುವ ಅನುಭವಿ ಆಟಗಾರರು. ಇವರ ಜಾಗದಲ್ಲಿ ಅವಕಾಶ ಪಡೆದಿರುವ ಯುವ ಪ್ರತಿಭೆಗಳು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಜೊತೆಗೆ ಐಪಿಎಲ್ 2022 ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಅನುಭವಿ ವಿಕೆಟ್‌ಕೀಪರ್‌ ದಿನೇಶ್‌ ಕಾರ್ತಿಕ್‌ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಆದರೆ, ರವಿ ಶಾಸ್ತ್ರಿ ತಮ್ಮ ಆಯ್ಕೆಯ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಿಂದ ದಿನೇಶ್‌ ಕಾರ್ತಿಕ್‌ ಅವರನ್ನು ಕೈಬಿಟ್ಟು, ಇಶಾನ್‌ ಕಿಶನ್‌ಗೆ ಓಪನಿಂಗ್‌ ಬೇಡ ಎಂದಿದ್ದಾರೆ. "ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಮ್ಯಾನೇಜ್ಮೆಂಟ್‌ ಮೊದಲ ಆಯ್ಕೆ ಆಟಗಾರರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ರಾಹುಲ್‌ ಜೊತೆಗೆ ಋತುರಾಜ್‌ ಗಾಯಕ್ವಾಡ್‌ ಇನಿಂಗ್ಸ್‌ ಆರಂಭಿಸಬಹುದು. ಇಶಾನ್‌ ಕಿಶನ್‌ಗೆ 3ನೇ ಕ್ರಮಾಂಕ ಕೊಟ್ಟು ಓಪನಿಂಗ್‌ ಜವಾಬ್ದಾರಿಯಿಂದ ಕೊಂಚ ವಿಶ್ರಾಂತಿ ನೀಡಲಿದ್ದಾರೆ," ಎಂದು ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "ಇಶಾನ್‌ ಕಿಶನ್‌ಗೆ ಮೂರನೇ ಕ್ರಮಾಂಕ ನೀಡಿದ್ದೇ ಆದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌, ರಿಷಭ್ ಪಂತ್ ಮತ್ತು ಹಾರ್ದಿಕ್‌ ಪಾಂಡ್ಯ ಅವರನ್ನು ಹೊಂದಬಹುದು. 7 ಮತ್ತು 8ನೇ ಕ್ರಮಾಂಕವನ್ನು ಅಕ್ಷರ್‌ ಪಟೇಲ್ ಮತ್ತು ಭುವನೇಶ್ವರ್‌ ಕುಮಾರ್‌ಗೆ ನೀಡಬಹುದು. ತಂಡದಲ್ಲಿ ಉಮ್ರಾನ್‌ ಮಲಿಕ್‌ ಅವರಿಗಿಂತಲೂ ಭುವನೇಶ್ವರ್‌ ಕುಮಾರ್‌ ಆಡುವುದು ಮುಖ್ಯ. ಅವರು ಹೊಸ ಚೆಂಡಿನ ಬಳಿಕ ಸ್ಲಾಗ್ ಓವರ್‌ಗಳಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲರು. ಬೌಲಿಂಗ್ ವಿಭಾಗದ ಸಾರಥ್ಯವನ್ನು ಯುಜ್ವೇಂದ್ರ ಚಹಲ್‌ಗೆ ವಹಿಸಬೇಕು. ಹರ್ಷಲ್‌ ಪಟೇಲ್ ಇನಿಂಗ್ಸ್‌ನ ಕೊನೆಯ ಓವರ್‌ಗಳ ಜವಾಬ್ದಾರಿ ಹೊರಬೇಕು," ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯಕ್ಕೆ ಮಾಜಿ ಕೋಚ್‌ ರವಿ ಶಾಸ್ತ್ರಿ ಆಯ್ಕೆ ಮಾಡಿರುವ ಟೀಮ್ ಇಂಡಿಯಾ XI ಹೀಗಿದೆ 1. ಕೆಎಲ್‌ ರಾಹುಲ್‌ (ಓಪನರ್‌/ ಕ್ಯಾಪ್ಟನ್‌) 2. ಋತುರಾಜ್‌ ಗಾಯಕ್ವಾಡ್‌ (ಓಪನರ್‌) 3. ಇಶಾನ್‌ ಕಿಶನ್‌ (ಬ್ಯಾಟ್ಸ್‌ಮನ್‌) 4. ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್‌) 5. ರಿಷಭ್ ಪಂತ್‌ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌) 6. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌) 7. ಅಕ್ಷರ್‌ ಪಟೇಲ್‌ (ಆಲ್‌ರೌಂಡರ್‌) 8. ಭುವನೇಶ್ವರ್‌ ಕುಮಾರ್‌ (ವೇಗದ ಬೌಲರ್‌) 9. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌) 10. ಅರ್ಷದೀಪ್‌ ಸಿಂಗ್‌/ಉಮ್ರಾನ್‌ ಮಲಿಕ್‌ (ವೇಗಿ) 11. ಹರ್ಷಲ್‌ ಪಟೇಲ್‌ (ಮಧ್ಯಮ ವೇಗಿ)