ದೇವನಹಳ್ಳಿಯಲ್ಲಿ ಕೆಎಚ್​ ಮುನಿಯಪ್ಪ ಅಪಸ್ವರ: ಗೊಂದಲದಲ್ಲಿ ನಾಯಕರು

ದೇವನಹಳ್ಳಿಯಲ್ಲಿ ಕೆಎಚ್​ ಮುನಿಯಪ್ಪ ಅಪಸ್ವರ: ಗೊಂದಲದಲ್ಲಿ ನಾಯಕರು

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹತ್ರ ಬರುತ್ತಿದ್ದು,ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಿದ್ಧತೆ ಚುರುಕುಗೊಳಿಸಿವೆ.

ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಹಾಕಬೇಕು ಎಂಬ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ನೂರಾರು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಹಂತದಲ್ಲಿಯೇ ಕಾಂಗ್ರೆಸ್ ಪಾಳಯದಲ್ಲಿ ಗೊಂದಲಗಳು ಕಾಣಿಸಿಕೊಂಡಿದ್ದು, ಮುಂದೆ ಇದು ಭಿನ್ನಮತವಾಗಿ ಪಕ್ಷವನ್ನು ಕಾಡುವ ಭೀತಿ ಶುರುವಾಗಿದೆ. ಟಿಕೆಟ್​ಗೆ ಅರ್ಜಿ ಹಾಕುವ ಸಂದರ್ಭದಲ್ಲಿಯೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.

ಇಷ್ಟು ದಿನ ಸಂಸದರಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಕೆ.ಎಚ್.ಮುನಿಯಪ್ಪ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳುವ ಬಗ್ಗೆ ಕೆ.ಎಚ್.ಮುನಿಯಪ್ಪ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯು ದೇವನಹಳ್ಳಿ ಕ್ಷೇತ್ರದ ಇತರ ಟಿಕೇಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ಗಾಗಿ ಈಗಾಗಲೇ 15 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ನೀಡುವುದಾದರೆ ನಮ್ಮಲ್ಲೇ ಒಬ್ಬರಿಗೆ ನೀಡಿ, ಬೇರೆಯವರಿಗೆ ಟಿಕೇಟ್ ನೀಡಿದರೆ ನಾವು ಯಾರಿಗಾಗಿ ಶ್ರಮ ಹಾಕಿ ಕೆಲಸ ಮಾಡಬೇಕು ಎಂದು ಸ್ಥಳೀಯ ನಾಯಕರು ಪ್ರಶ್ನಿಸಿದ್ದಾರೆ.