ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್ಪೆಕ್ಟರ್ ಅಮಾನತು

ಬೆಂಗಳೂರು: ದೂರು ಕೊಡಲು ಬಂದ ಮಹಿಳೆ ಜೊತೆ ಇನ್ಸ್ಪೆಕ್ಟರ್ ಅಸಭ್ಯವಾಗಿ ವರ್ತನೆ ಮಾಡಿದ ಆರೋಪ ಕೇಳಿ ಬಂದ ಬೆನ್ನಲ್ಲೇ ಕೊಡಿಗೆಹಳ್ಳಿ ಇನ್ಸ್ಪೆಕ್ಟರ್ ರಾಜಣ್ಣ ಅಮಾನತು ಆಗಿದ್ದಾರೆ. ಇಲಾಖಾ ತನಿಖೆಗೆ ಆದೇಶವಾಗಿದ್ದು, ರಾಜಣ್ಣ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.
ಮಹಿಳೆಯೊಬ್ಬರ ನಂಬರ್ ಪಡೆದು ಅಸಭ್ಯವಾಗಿ ಮೆಸೇಜ್ ಮಾಡಿದ್ದ ರಾಜಣ್ಣ, ಠಾಣೆಗೆ ಕರೆಸಿಕೊಂಡು ರೂಂಗೆ ಬರಲು ಹೇಳಿದ್ದರು. ಈ ಬಗ್ಗೆ ಮಹಿಳೆ ಸಾಕ್ಷಿ ಸಮೇತ ಡಿಸಿಪಿಗೆ ದೂರು ನೀಡಿದ್ದರು. ದೂರು ಆಧರಿಸಿ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರಾಥಮಿಕ ತನಿಖೆಗೆ ಅದೇಶ ನೀಡಿದ್ದರು.ಬಳಿಕ ಠಾಣೆಯ ಸಿಸಿಟಿವಿ ಪಡೆದು ಯಲಹಂಕ ಎಸಿಪಿ ತನಿಖೆ ನಡೆಸಿದ್ದರು. ಸಿಸಿಟಿವಿಯಲ್ಲಿ ರಾಜಣ್ಣ ರೂಂ ಕೀ ಮತ್ತು ಡ್ರೈ ಫ್ರೂಟ್ಸ್ ನೀಡಿದ್ದ ದೃಶ್ಯ ಸೆರೆಯಾಗಿದ್ದು, ಡಿಸಿಪಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದರು. ಇದೀಗ ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ರಾಜಣ್ಣ ಅಮಾನತುಗೊಂಡಿದ್ದಾರೆ.
ಪ್ರಕರಣದ ವಿವರ
ವಂಚನೆ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರು ದೂರು ನೀಡಲು ಹೋದಾಗ ಕೊಡಿಗೆಹಳ್ಳಿ ಇನ್ಸ್ಪೆಕ್ಟರ್ ರಾಜಣ್ಣ ಅಸಭ್ಯವಾಗಿ ವರ್ತನೆ ಮಾಡಿದ್ದರು. ಈ ಬಗ್ಗೆ ಮಹಿಳೆ ಯಲಹಂಕ ಎಸಿಪಿಗೆ ದೂರು ನೀಡಿದ್ದರು. ದೂರು ನೀಡಲು ಬಂದಾಗ ಮೊದಲು ಪ್ರಕರಣದ ಬಗ್ಗೆ ವಿಚಾರಿಸಿದರು. ಬಳಿಕ ಇನ್ಸ್ಪೆಕ್ಟರ್ ರಾಜಣ್ಣ ಬೆಡ್ ರೂಂಗೆ ಬಾ ಎಂದು ಆಹ್ವಾನಿಸಿದ್ದರು ಎಂದು ಮಹಿಳೆ ದೂರು ನೀಡಿದ್ದರು.