ದಾವಣಗೆರೆಯಲ್ಲಿ ನರ್ಸಿಂಗ್ ಮರುಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆಯಲ್ಲಿ ನರ್ಸಿಂಗ್ ಮರುಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ, ಜನವರಿ, 18: ನರ್ಸಿಂಗ್ ಮರುಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಾಗೆಯೇ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಡಿಸೆಂಬರ್ 22 ರಂದು ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾಗಿದ್ದು, ಡಿಸೆಂಬರ್‌ 25ಕ್ಕೆ ಅಂತ್ಯಗೊಂಡಿವೆ. ರಾಜ್ಯದಲ್ಲಿ ಒಟ್ಟು 88,000 ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪರೀಕ್ಷೆಗಳನ್ನು ಬರೆದಿದ್ದಾರೆ. ಆದರೆ ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮರುಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು ತುಂಬಾ ಶ್ರಮಪಟ್ಟು, ನಿದ್ದೆಗೆಟ್ಟು ಪರೀಕ್ಷೆಗಳನ್ನು ಬರೆದಿರುತ್ತಾರೆ. ಏಕಾಏಕಿ ಮರುಪರೀಕ್ಷೆ ಮಾಡುವುದರಿಂದ ಶ್ರಮಹಾಕಿದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಜನವರಿ 21ಕ್ಕೆ ದಿನಾಂಕ ನಿಗದಿ
ಈಗ ಪರೀಕ್ಷೆ ಬರೆಯಲು ಜನವರಿ 21ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಕೋರ್ಟ್ ಇದಕ್ಕೆ ಸಮ್ಮತಿ ಕೊಟ್ಟಿಲ್ಲ. ಮಕ್ಕಳ ಆಸಕ್ತಿಯ ಮೇರೆಗೆ ಮರುಪರೀಕ್ಷೆ ನಡೆಸುವಂತೆ ಆದೇಶ ನೀಡಿರುತ್ತದೆ. ಆದರೆ ಬೋರ್ಡ್‌ನವರು ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೇ, ಸಲಹೆ ಪಡೆಯದೇ ಏಕಾಏಕಿ ಮರುಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಕೆಎಸ್‌ಡಿಎನ್ ಬೋರ್ಡ್‌ನವರು ಈ ರೀತಿ ದಿಢೀರನೇ ಮರುಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಮರುಪರೀಕ್ಷೆಗೆ ವಿರೋಧ ವ್ಯಕ್ತ
ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ. ಆದರಿಂದ ಈ ಮರುಪರೀಕ್ಷೆಯ ಅಗತ್ಯವಿಲ್ಲ. ಯಾವ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದೆಯೋ ಆ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲಿ ಎಂಬುದು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಅಳಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.