ದಕ್ಷಿಣ ಕೊರಿಯಾ: ಸತತ ಮೂರನೇ ದಿನ ಅತಿ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

ದಕ್ಷಿಣ ಕೊರಿಯಾ: ಸತತ ಮೂರನೇ ದಿನ ಅತಿ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

ಸೋಲ್‌: ದಕ್ಷಿಣ ಕೊರಿಯಾದಲ್ಲಿ ಸತತ ಮೂರನೇ ದಿನ ಅತಿ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಸೋಂಕಿನ ಪ್ರಮಾಣವು ಹೆಚ್ಚಿರುವ ರಾಜಧಾನಿ ಸೋಲ್‌ನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಶನಿವಾರ ಪತ್ತೆಯಾದ 1,378 ಹೊಸ ಪ್ರಕರಣಗಳ ಪೈಕಿ 1,000 ಪ್ರಕರಣಗಳು ಸೋಲ್‌, ಜಿಯೊಂಗ್ಗಿ ಮತ್ತು ಇಂಚಿಯಾನ್ ಪ್ರಾಂತ್ಯದಲ್ಲಿ ವರದಿಯಾಗಿವೆ. ಈ ಪ್ರದೇಶಗಳಲ್ಲಿ ಸೋಮವಾರದಿಂದ ಜಾರಿಗೆ ಬರುವಂತೆ ಸಂಜೆ 6ರಿಂದ ಮೂರಕ್ಕಿಂತ ಹೆಚ್ಚು ಜನರು ಸೇರದಂತೆ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ನೈಟ್‌ಕ್ಲಬ್‌, ಚರ್ಚ್‌ಗಳು ಮುಚ್ಚಿರಲಿವೆ. ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಸಂದರ್ಶಕರ ಭೇಟಿಯನ್ನು ನಿಷೇಧಿಸಲಾಗಿದೆ. ಮದುವೆಗಳು, ಅಂತಿಮ ಸಂಸ್ಕಾರಗಳಲ್ಲಿ ಜನರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ.

ಬೂಸಾನ್‌, ಡಿಜಿಯಾನ್‌, ಉಲ್ಸಾನ್‌, ದಕ್ಷಿಣ ಚುಂಗ್‌ಚಿಯೊಂಗ್ ಮತ್ತು ಜಿಯೊಂಗ್‌ಸಾಂಗ್ ಪ್ರಾಂತ್ಯ ಸೇರಿದಂತೆ ದೇಶದ ಪ್ರಮುಖ ನಗರಗಳು ಮತ್ತು ಪ್ರದೇಶಗಳಲ್ಲಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.