ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್
ನವದೆಹಲಿ/ಗ್ವಾಲಿಯರ್: ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಇಂದು ಮಧ್ಯಪ್ರದೇಶದಕ್ಕೆ ಕರೆತರಲಾಗಿದೆ. ಕಳೆದ ಐದು ತಿಂಗಳ ಹಿಂದೆ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿತ್ತು.
12 ಚೀತಾಗಳನ್ನು ಹೊತ್ತ ವಾಯುಪಡೆಯ ವಿವಾನ ಇಂದು ಬೆಳಗ್ಗೆ 10 ಗಂಟೆಗೆ ಗ್ವಾಲಿಯರ್ ವಾಯುನೆಲೆಯಲ್ಲಿ ಲ್ಯಾಂಡ್ ಆಯಿತು.
ಒಟ್ಟು 12 ಚೀತಾಗಳಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳಿವೆ. 12 ಚೀತಾಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವ ಮುನ್ನ ಸುಮಾರು ಒಂದು ತಿಂಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗುವುದು. ಅವುಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಕ್ವಾರಂಟೈನ್ ಕೇಂದ್ರಕ್ಕೆ ಬಿಡುಗಡೆ ಮಾಡಿದರು.
ಸುಮಾರು 10 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ವನ್ಯಜೀವಿ ಕಾನೂನಿನ ಪ್ರಕಾರ ದೇಶಕ್ಕೆ ಬರುವ ಪ್ರಾಣಿಗಳನ್ನು ಸುಮಾರು 30 ದಿನ ಕ್ವಾರಂಟೈನ್ನಲ್ಲಿ ಇಡಬೇಕು.
ಅಂದಹಾಗೆ ಕಳೆದ ವರ್ಷ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. 8ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್ನಿಂದ ವಿಶೇಷವಾಗಿ ಡಿಸೈನ್ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್ನಿಂದ ಚೀತಾಗಳನ್ನು ಕರೆತರಲಾಯಿತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟರು.
70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. (ಏಜೆನ್ಸೀಸ್)