ಜೇವರ್ಗಿ ವಿಧಾನಸಭಾ ಕ್ಷೇತ್ರ: 50 ವರ್ಷ 'ಸಿಂಗ್' ಕುಟುಂಬದ್ದೇ ಏಕ ಚಕ್ರಾಧಿಪತ್ಯ

ಕಲಬುರಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳು ಒಳಗೊಂಡ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಸಿಂಗ್ ಕುಟುಂಬದ ಏಕ ಚಕ್ರಾಧಿಪತ್ಯ ವರ್ಷಗಳಿಂದ ಇದೆ. ಸತತ ಮೂರನೇ ಬಾರಿ ಗೆಲುವು ಸಾಧಿಸುವ ಉಮೇದಿನಲ್ಲಿ ಶಾಸಕ ಡಾ.ಅಜಯ ಸಿಂಗ್ ಇದ್ದರೆ, ಅವರನ್ನು ಮಣಿಸಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ನಡೆಸಿವೆ.
ಮಾಜಿ ಮುಖ್ಯಮಂತ್ರಿ ದಿ. ಎನ್.ಧರ್ಮಸಿಂಗ್ ಪ್ರತಿನಿಧಿಸಿದ್ದ ಜೇವರ್ಗಿ ಕ್ಷೇತ್ರವು 5 ದಶಕಗಳಿಂದ ರಜಪುತ 'ಸಿಂಗ್' ಕುಟುಂಬದ ಹಿಡಿತದಲ್ಲಿದೆ. ಕ್ಷೇತ್ರದಲ್ಲಿ ಈವರೆಗೆ ನಡೆದ 14 ವಿಧಾನಸಭಾ ಚುನಾವಣೆಗಳಲ್ಲಿ 10 ಬಾರಿ 'ಸಿಂಗ್' ಕುಟುಂಬಸ್ಥರೇ ಗೆದ್ದಿದ್ದಾರೆ. ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಇಲ್ಲಿ ನಾಲ್ಕು ಬಾರಿ ಮಾತ್ರ ಗೆದ್ದಿದ್ದಾರೆ.
1972ರಲ್ಲಿ ಗೆದ್ದು ನಾರಾಯಣ ಸಿಂಗ್ ಅವರು ಕಾಂಗ್ರೆಸ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅವರ ಪುತ್ರ ಎನ್.ಧರ್ಮಸಿಂಗ್ 1978ರಿಂದ 2008ರ ನಡುವೆ ಸತತ 7 ಬಾರಿ ಶಾಸಕರಾಗಿ, ಹಲವು ಖಾತೆಗಳನ್ನು ನಿರ್ವಹಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯೂ ಆದರು. 2008ರಲ್ಲಿ ದೊಡ್ಡಪ್ಪಗೌಡ ಪಾಟೀಲರ ವಿರುದ್ಧ ಸೋತು, 2009ರಲ್ಲಿ ಲೋಕಸಭೆಗೆ ಆಯ್ಕೆಯಾದರು.
2013ರಲ್ಲಿ ರಾಜಕೀಯ ಪ್ರವೇಶಿಸಿದ ಧರ್ಮಸಿಂಗ್ ಅವರ ಪುತ್ರ ಡಾ.ಅಜಯ ಸಿಂಗ್ ಅವರು ದೊಡ್ಡಪ್ಪಗೌಡ ಪಾಟೀಲರನ್ನು ಎರಡು ಬಾರಿ ಪರಾಭವಗೊಳಿಸಿದರು. 'ಅಜಯ' ಅವರ ಗೆಲುವು ಕಸಿದುಕೊಳ್ಳಲು ದೊಡ್ಡಪ್ಪಗೌಡ ಪಾಟೀಲ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದಾರೆ.
ಸ್ವಪಕ್ಷದ ಪ್ರತಿಸ್ಪರ್ಧಿಗಳ ನಡುವೆಯೂ ದೊಡ್ಡಪ್ಪಗೌಡ ಅವರು ಈಚೆಗೆ ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಮತ್ತೊಂದು ಅವಕಾಶಕ್ಕಾಗಿ ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ, 'ಕಮಲ'ದ ಟಿಕೆಟ್ ಮೇಲೆ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ರೇವಣಸಿದ್ದಪ್ಪ ಸಂಕಾಲಿ ಹಾಗೂ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 'ಆಕಾಂಕ್ಷಿಗಳ ಪೈಕಿ ಹೈಕಮಾಂಡ್ ಯಾರಿಗೆ ಒಬ್ಬರಿಗೆ ಮಣೆ ಹಾಕಿದರೂ ಅಸಮಾಧಾನದ ಬಿಸಿ 'ಕಮಲ'ಕ್ಕೆ ತಟ್ಟಲಿದೆ' ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಆಮ್ ಆದ್ಮಿ ಪಾರ್ಟಿಯಿಂದ ಈರಣ್ಣಗೌಡ ಪಾಟೀಲ ಗುಳ್ಯಾಳ, ಭಾರತ ಕಮ್ಯುನಿಸ್ಟ್ ಪಕ್ಷದ ಡಾ.ಮಹೇಶಕುಮಾರ ರಾಠೋಡ ಸ್ಪರ್ಧಿಸುವ ಸಾಧ್ಯತೆ ಇದೆ.
ಕ್ಷೇತ್ರದ ಜೆಡಿಎಸ್‌ನ ಕಾಯಂ 'ಅಭ್ಯರ್ಥಿ' ಹೆಗ್ಗಳಿಕೆಯ ಕೇದಾರಲಿಂಗಯ್ಯ ಹಿರೇಮಠ ಅವರು ಸತತ ಮೂರು ಬಾರಿ
ಸೋಲುಂಡಿದ್ದಾರೆ. ಚುನಾವಣೆಯಲ್ಲಿ ಅವರು ಸೋತರೂ ಮತಗಳಿಕೆಯ ಪ್ರಮಾಣ ಏರುಗತಿಯಲ್ಲಿದೆ. 2008ರಲ್ಲಿ 7,856, 2013ರಲ್ಲಿ 24,920 ಹಾಗೂ 2018ರಲ್ಲಿ 35,528 ಮತಗಳನ್ನು ಪಡೆದಿದ್ದಾರೆ.
ಬರಲಿರುವ ಚುನಾವಣೆಯಲ್ಲಿ 'ಕೈ' ಮತ್ತು 'ಕಮಲ'ಕ್ಕೆ ತೀವ್ರ ಸ್ಪರ್ಧೆ ಒಡ್ಡಲು 'ಅನುಕಂಪದ' ಮತಯಾಚನೆ ತಂತ್ರದೊಂದಿಗೆ ಸಜ್ಜಾಗುತ್ತಿದ್ದಾರೆ. ಆದರೆ, ಪಕ್ಷದ ವರಿಷ್ಠರು ಅಧಿಕೃತವಾಗಿ ಟಿಕೆಟ್ ಘೋಷಿಸಿಲ್ಲ.
ಕಡೆಗಣನೆ, ಅಪೂರ್ಣ ಕಾಮಗಾರಿಗಳ ಆರೋಪ
ಡಾ.ಅಜಯಸಿಂಗ್ ಅವರು ಕ್ಷೇತ್ರದ ಸಮುದಾಯಗಳಿಗೆ ನೀಡಿದ್ದ ಸಮುದಾಯಗಳ ಭವನಗಳ ನಿರ್ಮಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಆರೋಪವಿದೆ.
ಕಲ್ಯಾಣ ಮಂಟಪಗಳು, ಜಾತಿಗೊಂದು ಸಮುದಾಯ ಭವನಗಳ ಪೈಕಿ ಕೆಲವಷ್ಟೇ ಪೂರ್ಣಗೊಂಡಿವೆ. ತರಕಾರಿ ಮಾರುಕಟ್ಟೆ, ಶಾಪಿಂಗ್ ಮಾಲ್, ಟೌನ್ ಹಾಲ್ ಹಾಗೂ ಸಿಸಿ ರಸ್ತೆ ಕಾಮಗಾರಿ ಅಪೂರ್ಣವಾಗಿವೆ ಎಂಬ ಬೇಸರ ಸ್ಥಳೀಯರದ್ದು.
'ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪಕ್ಷ ನಿಷ್ಠರಾಗಿ ಕೆಲಸ ಮಾಡಿದರೂ ಕಡೆಗಣಿಸುತ್ತಿದ್ದಾರೆ' ಎಂಬ ಆರೋಪಗಳು ಶಾಸಕರ ಮೇಲಿವೆ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದಾಗಿ ಕೆಲವರು ಹೇಳುತ್ತಿದ್ದಾರೆ.
ಮಲ್ಲಾಬಾದ ಏತ ನೀರಾವರಿ ಬೇಡಿಕೆ
ಮಲ್ಲಾಬಾದ ಏತ ನೀರಾವರಿ ಯೋಜನೆ ಮೂಲಕ ಯಡ್ರಾಮಿ ಮತ್ತು ಜೇವರ್ಗಿ ತಾಲ್ಲೂಕಿನ 42 ಗ್ರಾಮಗಳ ಜಮೀನಿಗೆ ನೀರುಣಿಸಬೇಕು ಎಂಬ ರೈತರ ಮೂರು ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ.
'ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ' ಎಂಬುದು ಶಾಸಕರ ಆರೋಪ. '₹295.26 ಕೋಟಿ ಮೊತ್ತದ ಕಾಮಗಾರಿಗೆ ಮುಂಬರುವ ಕೃಷ್ಣಾ ಭಾಗ್ಯ ಜಲ ನಿಗಮದ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗುವುದು' ಎನ್ನುತ್ತಿದೆ ರಾಜ್ಯ ಸರ್ಕಾರ.
ಯೋಜನೆಯ ವಿಳಂಬಕ್ಕೆ ಬೇಸತ್ತ ರೈತರು ಪಟ್ಟಣದಲ್ಲಿ ಎತ್ತಿನ ಬಂಡಿ, ಧರಣಿ, ರಸ್ತೆ ತಡೆಯಂತಹ ಹೋರಾಟ ನಡೆಸಿದ್ದಾರೆ. ರೈತರ ಸಮಾಧಾನಕ್ಕೆ 'ಯೋಜನೆ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ'ದ ಭರವಸೆಯನ್ನು ಶಾಸಕ ಡಾ.ಅಜಯಸಿಂಗ್, 'ಆದ್ಯತೆ ಮೇಲೆ ಅನುಮೋದನೆ'ಯ ಆಶ್ವಾಸನೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೊಟ್ಟಿದ್ದಾರೆ.
ಜೇವರ್ಗಿ ಕ್ಷೇತ್ರ
ಹಾಲಿ ಶಾಸಕ ಡಾ.ಅಜಯ ಸಿಂಗ್ (ಕಾಂಗ್ರೆಸ್)
ಪಕ್ಷ; 2018; 2013; 2008
ಕಾಂಗ್ರೆಸ್; 68,508; 67,038; 46,531
ಬಿಜೆಪಿ; 52,452; 30,338; 46,461
ಜೆಡಿಎಸ್; 35,528; 24,920; 7,856
--------
ಹಾಲಿ ಮತದಾರರು
ಪುರುಷ; 1,19,248
ಮಹಿಳೆ; 1,15,388
ಒಟ್ಟು;2,35,038
ಮತಗಟ್ಟೆ; 279