ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ

ಐಸಿಸಿ ಅಂಡರ್ 19 ಮಹಿಳೆಯ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಮತ್ತು ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಆರಂಭಕ್ಕೆ ಮುನ್ನ ಕಾರ್ಯಕ್ರಮ ನಡೆಯಿತು.
ಶಫಾಲಿ ವರ್ಮಾ ಪಡೆ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 5 ಕೋಟಿ ರುಪಾಯಿ ಬಹುಮಾನದ ಚೆಕ್ ನೀಡಿ ಗೌರವಿಸಿದರು
ಇದೇ ಸಂದರ್ಭದಲ್ಲಿ ಭಾರತದ ಯುವ ತಂಡಕ್ಕೆ ಅಭಿನಂದಿಸಿದ ಸಚಿನ್ ತೆಂಡೂಲ್ಕರ್, ಶಫಾಲಿ ವರ್ಮಾ ಪಡೆಯನ್ನು ಶ್ಲಾಘಿಸಿದರು. "ಇಡೀ ದೇಶ ಮತ್ತು ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಈ ಜಯವನ್ನು ಬಹಳ ದಿನಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನಗೆ 10 ವರ್ಷದವನಿದ್ದಾಗ 1983ರಲ್ಲಿ ಕನಸು ಆರಂಭವಾಯಿತು. ಈ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಯುವತಿಯರಲ್ಲಿ ಕನಸನ್ನು ಬಿತ್ತಿದ್ದೀರಾ. ನಿಮ್ಮಂತೆ ಆಗಬೇಕೆಂದು ಕನಸು ಕಾಣುವ ಅನೇಕ ಯುವತಿಯರು ದೇಶದ ಒಳಗೆ ಮತ್ತು ಹೊರಗೆ ಇದ್ದಾರೆ. ನಿಮಗೆ ಅಭಿನಂದನೆಗಳು. ನೀವು ಅನೇಕ ಜನವರಿಗೆ ಆದರ್ಶವಾಗಿರುವುದರಿಂದ, ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ" ಎಂದು ಹೇಳಿದರು.
ನಿಮ್ಮಿಂದ ಇನ್ನೂ ದೊಡ್ಡ ಸಾಧನೆ ಬರಲಿ
"ದೇಶಕ್ಕಾಗಿ ನೀವು ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಬೇಕು, ಇನ್ನೂ ಮಹತ್ತರವಾದುದ್ದನ್ನು ನೀವು ಸಾಧಿಸುತ್ತೀರಿ ಎನ್ನುವ ನಂಬಿಕೆ ಇದೆ" ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದರು. ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಬಿಸಿಸಿಐ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಚಿನ್ ಬಿಸಿಸಿಐಯನ್ನು ಶ್ಲಾಘಿಸಿದರು.
"ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗುತ್ತಿರುವುದು ಬಹಲ ದೊಡ್ಡ ವಿಷಯವಾಗಿದೆ. ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ನಾನು ನಂಬುತ್ತೇನೆ. ಕ್ರೀಡೆಯಲ್ಲಿ ಮಾತ್ರವಲ್ಲ ಎಲ್ಲಾ ವಲಯಗಳಲ್ಲೂ ಅವರಿಗೆ ಸಮಾವ ಅವಕಾಶ ಸಿಗಬೇಕು" ಎಂದು ಹೇಳಿದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಆಶಿಶ್ ಶೆಲಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವಕಪ್ ಗೆದ್ದು ದೇಶಕ್ಕೆ ಹೆಮ್ಮೆ ತಂದ ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರುಪಾಯಿಗಳ ಚೆಕ್ ವಿತರಿಸಲಾಯಿತು.