ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಬಳಿಕ ಜನಿಸಿದ್ದಾರೆ ಈ 4 ಸ್ಟಾರ್ ಕ್ರಿಕೆಟಿಗರು!

ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಬಳಿಕ ಜನಿಸಿದ್ದಾರೆ ಈ 4 ಸ್ಟಾರ್ ಕ್ರಿಕೆಟಿಗರು!

ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನ ಬೌಲರ್‌ಗಳ ಪೈಕಿ ನಂಬರ್ 1 ಸ್ಥಾನಕ್ಕೇರಿದ್ದಾರೆ ಈ ಇಂಗ್ಲೆಂಡ್‌ನ ಸ್ಟಾರ್ ವೇಗಿ. ಈಗಾಗಲೇ 40ರ ಹರೆಯವನ್ನು ದಾಟಿರುವ ಆಂಡರ್ಸನ್ ಇನ್ನು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ದಾಳಿ ನಡೆಸುತ್ತಿದ್ದು ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ.

ಅಂದಹಾಗೆ ಈ ಅನುಭವಿ ವೇಗಿ ಪದಾರ್ಪಣೆ ಮಾಡಿದ್ದು 2002ರಲ್ಲಿ. ಅಂದರೆ 20ಕ್ಕೂ ಅಧಿಕ ವರ್ಷಗಳಿಂದ ಜಿಮ್ಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಆಡುತ್ತಿದ್ದಾರೆ. ಇನ್ನು ಕೂಡ ಇಂಗ್ಲೆಂಡ್ ತಂಡದ ಅಗ್ರ ಬೌಲರ್ ಎನಿಸಿಕೊಂಡಿರುವುದು ಅವರ ಸ್ಥಿರತೆಗೆ ಸಾಕ್ಷಿ. ಕುತೂಹಲಕಾರಿಯೆಂದರೆ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಕೆಲ ಕ್ರಿಕೆಟಿಗರು ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಹುಟ್ಟಿದವರು ಎಂಬುದು ಕುತೂಹಲಕಾರಿ ಸಂಗತಿಯಾದರೂ ನಿಜ. ಅಂಥಾ ನಾಲ್ಕು ಆಟಗಾರರ ಮಾಹಿತಿ ಇಲ್ಲಿದೆ.

ಭಾರತೀಯ ಆಟಗಾರ್ತಿ ರಿಚಾ ಘೋಷ್

ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಆಟಗಾರ್ತಿ ರಿಚಾ ಘೋಷ್. ಇತ್ತೀಚೆಗಷ್ಟೇ ಅಂಡರ್ 19 ವಿಶ್ವಕಪ್‌ನಲ್ಲಿಯೂ ಭಾರತದ ಪರವಾಗಿ ಆಡಿದ್ದ ರಿಚಾ ಮಹಿಳಾ ಸೀನಿಯರ್ ತಂಡದಲ್ಲಿಯೂ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿ ಗಮನ ಸೆಳೆದಿದ್ದಾರೆ. ಇನ್ನು WPLನಲ್ಲಿಯೂ ಉತ್ತಮ ಮೊತ್ತಕ್ಕೆ ಹರಾಜಾಗಿರುವ ರಿಚಾ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ರಿಚಾ ಘೋಚ್ ಜನಿಸಿದ್ದಾರೆ ಎಂಬುದು ಗಮನಾರ್ಹ. ಅಂದ ಹಾಗೆ ರಿಚಾ ಘೋಷ್ ಅವರ ಹುಟ್ಟಿದ ದಿನಾಂಕ ಸೆಪ್ಟೆಂಬರ್ 23, 2003.

ದಕ್ಷಿಣ ಆಫ್ರಿಕಾ ಯುವ ಆಟಗಾರ ಡೆವಾಲ್ಡ್ ಬ್ರೇವಿಸ್

ಡೆವಾಲ್ಡ್ ಬ್ರೇವಿಸ್ ದಕ್ಷಿಣ ಆಫ್ರಿಕಾ ತಂಡದ ಭವಿಷ್ಯದ ತಾರೆ ಎಂದೇ ಹೆಸರಾಗಿರುವ ಆಟಗಾರ. ತಮ್ಮ ಆಟದ ಶೈಲಿಯಿಂದ ಬೇಬಿ ಎಬಿಡಿ ಎಂದೇ ಖ್ಯಾತರಾಗಿದ್ದಾರೆ. ಇವರು ಹುಟ್ಟಿದ್ದು ಏಪ್ರಿಲ್ 29, 2003. ಐಪಿಎಲ್ ಹಾಗು ಇತರ ಲೀಗ್ ಕ್ರಿಕೆಟ್‌ಗಳಲ್ಲಿ ನೀಡಿರುವ ಅಬ್ಬರದ ಪ್ರದರ್ಶನದಿಂದಾಗಿ ಬ್ರೆವಿಸ್ ಈಗಾಗಲೇ ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ.

ನೆದರ್ಲೆಂಡ್ಸ್ ಆಟಗಾರ ಶರೀಜ್ ಅಹ್ಮದ್

ನೆದರ್ಲೆಂಡ್ಸ್ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಯುವ ಆಟಗಾರ ಶರೀಜ್ ಅಹ್ಮದ್ ಕೂಡ ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಹುಟ್ಟಿದ ಆಟಗಾರನಾಗಿದ್ದಾರೆ. ಏಪ್ರಿಲ್ 21 2003ರಲ್ಲಿ ಶರೀಜ್ ಜನಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಚ್ ತಂಡವನ್ನು ಶರೀಜ್ ಈವರೆಗೆ ಎರಡು ಏಕದಿನ ಪಂದ್ಯಗಳಲ್ಲಿ ಹಾಗೂ 9 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಭಾರತದ ಸ್ಟಾರ್ ಆಟಗಾರ್ತಿ ಶಫಾಲಿ ವರ್ಮಾ

ಭಾರತದ ಮಹಿಳಾ ತಂಡದಲ್ಲಿ ಮಿಂಚುತ್ತಿರುವ ಮತ್ತೋರ್ವ ಆಟಗಾರ್ತಿ ಶಫಾಲಿ ವರ್ಮಾ ಕೂಡ ಈ ಪಟ್ಟಿಯಲ್ಲಿರುವ ಮತ್ತೋರ್ವ ಆಟಗಾರ್ತಿ. ಶಫಾಲಿ ವರ್ಮಾ ಕೂಡ ಜೇಮ್ಸ್ ಆಂಡರ್ಸನ್ ಪದಾರ್ಪಣೆಯ ಬಳಿಕ ಹುಟ್ಟಿದ ಆಟಗಾರ್ತಿ. ಅಂಡರ್‌19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಶಫಾಲಿ ಸೀನಿಯರ್ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯೂ ಹೌದು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಶಫಾಲಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.