'ಗ್ರಾಮ ಒನ್' ಕೇಂದ್ರಗಳಿಗೆ ಮತ್ತಷ್ಟು ತಾಂತ್ರಿಕ, ಆರ್ಥಿಕ ಶಕ್ತಿ: ಮನೆ ಬಾಗಿಲಲ್ಲೇ ನೂರಾರು ಸೇವೆಗಳು ಲಭ್ಯ
ಬೆಂಗಳೂರು: 'ಗ್ರಾಮ ಒನ್' ನನ್ನ ಕನಸಿನ ಕ್ರಾಂತಿಕಾರಿ ಯೋಜನೆಯಾಗಿದ್ದು, ಇವುಗಳಿಗೆ ಮತ್ತಷ್ಟು ಆರ್ಥಿಕ, ತಾಂತ್ರಿಕ ಶಕ್ತಿ ತುಂಬಲಾಗುವುದು. ಇದರಿಂದ ನೂರಾರು ಸೇವೆಗಳು ಮನೆ ಬಾಗಿಲಲ್ಲಿ ಲಭ್ಯವಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಸರ್ಕಾರದ ಮಹತ್ವಕಾಂಕ್ಷಿಯ 'ಗ್ರಾಮ ಒನ್' ಯೋಜನೆ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಒನ್ ಯೋಜನೆ ರಾಜ್ಯದ ಜನರ ವಿಶ್ವಾಸ ಗಳಿಸಿದ್ದು, ಸರ್ಕಾರದ ನೂರಾರು ಸೇವೆ ಈ ಯೋಜನೆ ಮೂಲಕ ಮನೆ ಮನೆಗೆ ತಲುಪುತ್ತಿದೆ. ಗ್ರಾಮ ಒನ್ ಕೇಂದ್ರಗಳನ್ನು ಮತ್ತಷ್ಟು ಆರ್ಥಿಕವಾಗಿ, ತಾಂತ್ರಿಕವಾಗಿ ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮ ಒನ್ ಕ್ರಾಂತಿಕಾರಿ ಯೋಜನೆಯಾಗಿದೆ. ಸರ್ಕಾರದ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನ ಮತ್ತು ಸೇವಾ ಮನೋಭಾವದ ಮೂಲಕ ತಲುಪಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಯೋಜನೆಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು. ಮನೆ ಮನೆಗೆ ಸೇವೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜಾತಿ ಆದಾಯ ಪ್ರಮಾಣ ಪತ್ರದಿಂದ ಹಿಡಿದು ಸರ್ಕಾರದಿಂದ ದೊರೆಯಬೇಕಾದ ಅನೇಕ ಪ್ರಮಾಣಪತ್ರ, ಸೇವೆಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಿ ಮನೆ ಮನೆಗೆ ಸೌಲಭ್ಯ ತಲುಪಿಸಲಾಗುತ್ತಿದೆ ಎಂದರು.