ಗುರುಗ್ರಾಮ್‌: ಮಸೀದಿಯ ಮೇಲೆ 200 ಜನರ ಗುಂಪು ದಾಳಿ: ನಮಾಜ್‌ ಮಾಡುತ್ತಿದ್ದವರ ಮೇಲೆ ಹಲ್ಲೆ, ಬೆದರಿಕೆ. ಎಫ್‌ಐಆರ್‌ ದಾಖಲು

ಗುರುಗ್ರಾಮ್‌: ಮಸೀದಿಯ ಮೇಲೆ 200 ಜನರ ಗುಂಪು ದಾಳಿ: ನಮಾಜ್‌ ಮಾಡುತ್ತಿದ್ದವರ ಮೇಲೆ ಹಲ್ಲೆ, ಬೆದರಿಕೆ. ಎಫ್‌ಐಆರ್‌ ದಾಖಲು

ಗುರುಗ್ರಾಮ್: 200 ಕ್ಕೂ ಹೆಚ್ಚು ಜನರ ಗುಂಪು ಗುರುಗ್ರಾಮ್‌ನ ಹಳ್ಳಿಯೊಂದರಲ್ಲಿ ಮಸೀದಿಯನ್ನು ಧ್ವಂಸ ಮಾಡಿದ್ದು, ಒಳಗೆ ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೇ, ಅವರನ್ನು ಗ್ರಾಮದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬುಧವಾರ ರಾತ್ರಿ ಭೋರಾ ಕಲನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದ್ರೆ, ಇಲ್ಲಿಯವರೆಗೂ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

ಸುಬೇದಾರ್ ನಜರ್ ಮೊಹಮ್ಮದ್ ಎಂಬುವರು ನೀಡಿದ ದೂರಿನ ಪ್ರಕಾರ, ಭೋರ ಕಾಳನ್ ಗ್ರಾಮದಲ್ಲಿ ಕೇವಲ ನಾಲ್ಕು ಮುಸ್ಲಿಂ ಕುಟುಂಬಗಳಿವೆ. ರಾಜೇಶ್ ಚೌಹಾಣ್ ಅಲಿಯಾಸ್ ಬಾಬು, ಅನಿಲ್ ಭಡೋರಿಯಾ ಮತ್ತು ಸಂಜಯ್ ವ್ಯಾಸ್ ನೇತೃತ್ವದ ಸುಮಾರು 200 ಜನರನ್ನು ಒಳಗೊಂಡ ಗುಂಪು ಬುಧವಾರ ಬೆಳಗ್ಗೆ ಮಸೀದಿಯನ್ನು ಸುತ್ತುವರೆದು ಪ್ರಾರ್ಥನಾ ಮಂದಿರಕ್ಕೆ ಪ್ರವೇಶಿಸಿ ಗದ್ದಲ ಸೃಷ್ಟಿಸಿದರು. ಅವರು ನಮಾಜಿಗಳನ್ನು ಗ್ರಾಮದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದರು.

ರಾತ್ರಿ ಮತ್ತೆ ನಾವು ಮಸೀದಿಯ ಪ್ರಾರ್ಥನಾ ಮಂದಿರದ ಒಳಗೆ ಪ್ರಾರ್ಥನೆ ಮಾಡುತ್ತಿದ್ದಾಗ ಗುಂಪು ಈ ಬಂದು ನಮಾಜಿಗಳ ಮೇಲೆ ಹಲ್ಲೆ ನಡೆಸಿ ಪ್ರಾರ್ಥನಾ ಮಂದಿರಕ್ಕೆ ಬೀಗ ಜಡಿದಿದು ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ' ಎಂದು ಸುಬೇದಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. .

ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದ್ದು, ವಾಸ್ತವಾಂಶವನ್ನು ಪರಿಶೀಲಿಸುತ್ತಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿ ಹಿರಿಯ ಪೊಲೀಸ್‌ ಅಧಿಕಾರಿ ಗಜೇಂದರ್‌ ಸಿಂಗ್‌ ತಿಳಿಸಿದ್ದಾರೆ.‌