ಗಂಡನ ಮನೆಯ ಕಿರುಕುಳ ಸಹಿಸದೆ ಸಾಯಲು ಹೊರಟ 19 ವರ್ಷದ ತಾಯಿ, ಮಗುವನ್ನು ಉಳಿಸಿದ ಪೊಲೀಸರು

ಗಂಡನ ಮನೆಯ ಕಿರುಕುಳ ಸಹಿಸದೆ ಸಾಯಲು ಹೊರಟ 19 ವರ್ಷದ ತಾಯಿ, ಮಗುವನ್ನು ಉಳಿಸಿದ ಪೊಲೀಸರು

ದೆಹಲಿ: ಗಂಡನ ಮನೆಯ ಕಿರುಕುಳ ತಾಳಲಾರದೇ ಸಾಯಲು ನಿರ್ಧರಿಸಿ ಹೊರಟ 19 ವರ್ಷದ ಯುವತಿ ಹಾಗೂ ಆಕೆಯ 9 ತಿಂಗಳ ಮಗುವನ್ನು ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.

ಕಳೆದ ವರ್ಷ ಮದುವೆಯಾದ ಯುವತಿಗೆ 9 ತಿಂಗಳ ಮಗುವಿದೆ. ಗಂಡನೊಂದಿಗೆ ಖುಷಿಯಾಗಿ ಇರಬೇಕಾದ ಹೆಣ್ಣು ಮಗಳು ಗಂಡನ ಮನೆಯ ನಿತ್ಯದ ಕಿರುಕುಳವನ್ನು ತಡೆಯಲಾರದೆ ಮಂಗಳವಾರ (ಜ.31 ರಂದು) ತಾಯಿಗೆ ಕರೆ ಮಾಡಿ, ಅತ್ತು ಕಷ್ಟವನ್ನು ಹೇಳಿ ಗಂಡನ ಮನೆಯಿಂದ ಮಗುವನ್ನು ಎತ್ತಿಕೊಂಡು ಹೊರಟಿದ್ದಳು.

ಎಲ್ಲಿಗೆ ಹೋಗುತ್ತಾಳೆ, ಏನು ಮಾಡಿಕೊಳ್ಳುತ್ತಾಳೆ ಎನ್ನುವ ಭೀತಿಯಲ್ಲೇ ಯುವತಿಯ ತಾಯಿ ಆದರ್ಶ ನಗರದ ಪೊಲೀಸ್‌ ಠಾಣೆಗೆ ಕರೆ ಮಾಡುತ್ತಾರೆ. ಕರೆ ಮಾಡಿ ತನ್ನ ಮಗಳು ಜೀವಕ್ಕೆ ಏನಾದರೂ ಅಪಾಯವನ್ನು ಮಾಡಿಕೊಳ್ಳಬಹುದು ಎಂದು ಹೇಳಿ, ಗಂಡ ಹಾಗೂ ಅವರ ಮನೆಯವರ ಮೇಲೆ ಕಿರುಕುಳದ ಬಗ್ಗೆ ದೂರು ನೀಡಿದ್ದರು.

ಇದೇ ಮಾಹಿತಿಯನ್ನು ಪಡೆದುಕೊಂಡು ಪೊಲೀಸರು ತಕ್ಷಣ ತಾಂತ್ರಿಕ ಸಹಾಯವನ್ನು ಪಡೆದು, ಕೆಲವೇ ಗಂಟೆಗಳಲ್ಲಿ 19 ವರ್ಷದ ಯುವತಿ ಮತ್ತು ಆಕೆಯ 9 ತಿಂಗಳ ಮಗುವನ್ನು ಪಾರ್ಕ್‌ ವೊಂದರಲ್ಲಿ ಪತ್ತೆ ಹಚ್ಚಿ, ಠಾಣೆಗೆ ಕರೆ ತಂದು, ಸ್ವಲ್ಪ ಹೊತ್ತು ಆರೈಕೆ ಮಾಡಿ, ವಿಚಾರಣೆ ಮಾಡುತ್ತಾರೆ.

ವಿಚಾರಣೆ ವೇಳೆ ಯುವತಿ ತಾನು ಸಾಯಲು ಹೊರಟಿದ್ದೆ. ಗಂಡನ ಮನೆಯ ದೌರ್ಜನ್ಯದಿಂದ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದೆ ಎಂದು ಹೇಳಿದ್ದಾಳೆ. ಪೊಲೀಸರ ಸಮಯ ಪ್ರಜ್ಞೆಯಿಂದ 19 ವರ್ಷದ ಹೆಣ್ಣು ಮಗಳ ಜೀವ ಉಳಿದಿದೆ.