ಖಳಪಾತ್ರಗಳನ್ನು ರಾಷ್ಟ್ರಪ್ರೇಮಿಗಳೆಂದು ಬಿಂಬಿಸಿದರು: ಪ್ರಸನ್ನ ಬೇಸರ
ಮೈಸೂರು: 'ಚುನಾವಣಾ ರಾಜಕಾರಣದ ಅವಸರಕ್ಕೆ ಬಿದ್ದ ಕೆಲವರು, ನಾಟಕವೊಂದರ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಎಂಬ ಖಳಪಾತ್ರಗಳನ್ನು ರಾಷ್ಟ್ರಪ್ರೇಮಿಗಳೆಂದು ಬಿಂಬಿಸಿದರು' ಎಂದು ರಂಗಕರ್ಮಿ ಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ನಗರದ ಕಿರುರಂಗಮಂದಿರದಲ್ಲಿ 'ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ' ಆಯೋಜಿಸಿರುವ 7 ದಿನಗಳ 'ಮೈಸೂರು ರಂಗಹಬ್ಬ'ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
'ನಾಟಕದ ರಾಜ ವಸಾಹತುಶಾಹಿ ಶತ್ರುವಿನ ವಿರುದ್ಧ ಹೋರಾಡಿ ಸಾವನ್ನಪ್ಪುತ್ತಾನೆ. ಇಂತಹ ರಾಜನ ಬೆನ್ನಿಗೆ ಚೂರಿ ಹಾಕಿ ಕೊಂದವರು, ಬ್ರಿಟಿಷ್ ವಸಾಹತುಶಾಹಿಯ ಗುಲಾಮರೂ ಎಂದಾಯಿತು ತಾನೆ? ಅಂದರೆ, ಉರಿ ಗೌಡ ಹಾಗೂ ದೊಡ್ಡ ನಂಜೇಗೌಡರು ಹಿಂದೂ ಮೀರ್ ಸಾದಿಕ್ ಎಂದಾಯಿತು ತಾನೆ' ಎಂದು ಪ್ರಶ್ನಿಸಿದರು.
'ರಾಜಕೀಯ ಪಕ್ಷವೊಂದು ಚುನಾವಣೆ ಗೆಲ್ಲುವ ಅವಸರದಲ್ಲಿ ಈ ಸಂಗತಿಯನ್ನು ಅನುಮೋದಿಸಿತು ಮಾತ್ರವಲ್ಲ, ಚುನಾವಣೆಯ ಕೇಂದ್ರ ಸಂಗತಿಯಾಗಿ ಪ್ರಚಾರ ಮಾಡಿತು. ಅದರಿಂದಾಗಿ ಇಡೀ ಗೌಡ ಕುಲವೇ ಕೆರಳಿ ನಿಂತಿತು. ಏಕೆಂದರೆ, ಎಲ್ಲಾ ಭಾರತೀಯರಂತೆ, ಗೌಡ ಕುಲದವರು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವತಂತ್ರವೀರರು. ತ್ಯಾಗ ಬಲಿದಾನಗಳಿಗೆ ಹೆಸರಾದವರು' ಎಂದರು.
'ರಂಗಭೂಮಿಗೆ ಸತ್ಯವನ್ನು ಸಾಧಿಸುವ ಗುರುತರ ಜವಾಬ್ದಾರಿಯಿದೆ. ಶಕ್ತಿಶಾಲಿ ಸಂಕೇತಗಳನ್ನು ಸೃಷ್ಟಿಸುವ ಮೂಲಕ ಅದು ತನ್ನ ಈ ಕರ್ತವ್ಯವನ್ನು ನಿರ್ವಹಿಸಲು ಹೆಣಗುತ್ತಿರುತ್ತದೆ. ಆದರೆ, ಸಂಕೇತಗಳ ಸದ್ಬಳಕೆ ಸಾಧ್ಯ, ದುರ್ಬಳಕೆಯೂ ಸಾಧ್ಯ. ಸದ್ಬಳಕೆಯ ಮೂಲಕ ರಂಗಭೂಮಿಯೂ ಉತ್ತಮ ಸಮಾಜವನ್ನು ಸೃಷ್ಟಿಸಬಹುದಾಗಿದೆ. ಆದರೆ, ದುರ್ಬಳಕೆಯ ಮೂಲಕ ಸಾಮಾಜಿಕ ಜಗಳಗಂಟಿತನವನ್ನು ಕೆರಳಿಸಬಹುದಾಗಿದೆ' ಎಂದು ಅಭಿಪ್ರಾಯ ಪಟ್ಟರು.
'ಸಂಕೇತಗಳ ಸದ್ಬಳಕೆ ಮಾಡುವವರು ತಾಳ್ಮೆಯಿಂದ ಕೆಲಸ ಮಾಡುತ್ತಾರೆ, ಸತ್ಯಕ್ಕೆ ಹಲವು ಮುಖಗಳಿರುತ್ತದೆ ಎಂಬ ಅರಿವು ಸಮಾಜವನ್ನು ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯುತ್ತದೆ. ದುರಂತವೆಂದರೆ ದುರ್ಬಳಕೆ ಮಾಡುತ್ತಿರುವವರಿಗೆ ತಾವು ಹಾಗೆ ಮಾಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಅರಿವಿಗೆ ಬದಲಾಗಿ ಅವಸರವಿರುತ್ತದೆ. ಉರಿ ಹಾಗು ನಂಜು ಕಾರುವ ಪ್ರವೃತ್ತಿ ಅವರದಾಗಿರುತ್ತದೆ' ಎಂದರು.
'ಸಂಕೇತಗಳು ಎರಡಲಗಿನ ಕತ್ತಿಗಳು. ಅತಿಯಾದ ಉರಿ, ಅತಿಯಾದ ನಂಜು ಹಾಗೂ ಚುನಾವಣಾ ರಾಜಕಾರಣದ ದುರಾಸೆಗೆ ಬಲಿಬಿದ್ದರೆ ಎಂತಹ ಅನಾಹುತವಾಗಬಲ್ಲದು ಎಂಬುದಕ್ಕೆ ಉರಿ ಮತ್ತು ನಂಜು ಪ್ರಸಂಗ ಉದಾಹರಣೆಯಾಗಿದೆ' ಎಂದು ಹೇಳಿದರು.
'ಮೈಸೂರು ರಂಗ ಉತ್ಸವದಲ್ಲಿ ಹಲವು ನಾಟಕಗಳ ಪ್ರದರ್ಶನವಾಗಲಿದೆ. ಹಲವು ಸಂಕೇತಗಳ ಅನಾವರಣವಾಗಲಿದೆ. ಜಾಗರೂಕರಾಗಿರಿ. ತಾಳ್ಮೆಗೆಡದಿರಿ. ಸತ್ಯಕ್ಕೆ ಹಲವು ಮಗ್ಗುಲಗಳಿರುತ್ತವೆ ಎಂಬ ಸಂಗತಿಯನ್ನು ಮರೆಯದಿರಿ. ರಂಗಭೂಮಿಗೆ ಅಪಾರವಾದ ಶಕ್ತಿ ಇದೆ ಎಂದು ಇದೇ ಪ್ರಸಂಗವು ಸಾಬೀತುಪಡಿಸಿದೆ. ಶಕ್ತಿಯ ಸದ್ಬಳಕೆ ಮಾಡಿರಿ. ದೇಶ ಕಟ್ಟಿರಿ. ದೇಶವನ್ನು ಒಟ್ಟಾಗಿ ಹಿಡಿದಿಡಿರಿ' ಎಂದು ಸಲಹೆ ನೀಡಿದರು.
'ಉತ್ಸವದಲ್ಲಿ ಎಚ್ಚರಿಕೆಯ ಕೆಲವು ಮಾತುಗಳನ್ನಾಡಲು ನಾನು ನಿರ್ಧರಿಸಿದ್ದೇನೆ ಎಂದು ತಿಳಿಸಿದಾಗ ಮಿತ್ರರೊಬ್ಬರು, ಹುಷಾರಾಗಿರಿ. ನಿಮ್ಮ ಮಾತಿನ ಕಾರಣಕ್ಕಾಗಿಯೇ ಆಳುವ ಸರ್ಕಾರವು ನಿಮ್ಮನ್ನು ಜೈಲಿಗೆ ತಳ್ಳಿದರೂ ಆಶ್ಚರ್ಯವಿಲ್ಲ ಎಂದರು. ನಾನು ನಕ್ಕೆ, ಅವರಿಗೆ ಸ್ವತಂತ್ರ ಸಂಗ್ರಾಮದ ನೆನಪು ಮಾಡಿಕೊಟ್ಟೆ. ಹಿಂದೂ, ಮುಸಲ್ಮಾನ, ಗೌಡ, ಲಿಂಗಾಯತ, ಕುರುಬ, ದಲಿತ, ಬ್ರಾಹ್ಮಣ, ಶೆಟ್ಟಿ ಸೇರಿದಂತೆ ಹಲವು ಸಮುದಾಯಗಳು ಯಾವುದೇ ಭೇದವಿಲ್ಲದೆ, ಸತ್ಯವನ್ನು ಎತ್ತಿ ಹಿಡಿಯಲಿಕ್ಕಾಗಿ ನಗುನಗುತ್ತಾ ಜೈಲಿಗೆ ಹೋಗಿವೆ. ಅಂಥ ಭಾರತೀಯರ ನೆನಪು ಮಾಡಿಕೊಟ್ಟೆ' ಎಂದು ತಿಳಿಸಿದರು.
ರಂಗಕರ್ಮಿಗಳಾದ ದೀಪಕ್ ಮೈಸೂರು, ಮಂಡ್ಯರಮೇಶ್, ಸುರೇಶ್ ಬಾಬು, ಪ್ರೊ.ಎಸ್.ಆರ್.ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇದ್ದರು.
ಕಾರ್ಯಕ್ರಮದ ನಂತರ ಸಾತ್ವಿಕಿ ಫೌಂಡೇಶನ್ ಕಲಾವಿದರು 'ಸೇತು ಮಾಧವನ ಸಲ್ಲಾಪ' ನಾಟಕ ಪ್ರದರ್ಶಿಸಿದರು.