ಕ್ರಿಪ್ಟೋಕರೆನ್ಸಿʼ ಆರ್ಥಿಕ ಉತ್ಪನ್ನವಲ್ಲ, ಅದೊಂದು ಕೇವಲ ಜೂಜು

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಕ್ರಿಪ್ಟೋಕರೆನ್ಸಿ(Cryptocurrency)ಗಳ ಸಂಪೂರ್ಣ ನಿಷೇಧದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ಬಿಸಿನೆಸ್ ಟುಡೆ ಬ್ಯಾಂಕಿಂಗ್ ಮತ್ತು ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್, ಕ್ರಿಪ್ಟೋ ಜೂಜಾಟವನ್ನು ಹೊರತುಪಡಿಸಿ ಬೇರೇನೂ ಅಲ್ಲ ಮತ್ತು ಅದು ಯಾವುದೇ ಮೌಲ್ಯವನ್ನು ಹೊಂದಿಲ್ಲ.
ಅಷ್ಟೇ ಅಲ್ಲದೇ, ಕ್ರಿಪ್ಟೋ ಸಂಪೂರ್ಣ ನಿಷೇಧದ ಅಗತ್ಯವನ್ನು ಪುನರುಚ್ಚರಿಸಿದ ದಾಸ್, 'ಕೆಲವರು ಕ್ರಿಪ್ಟೋಕರೆನ್ಸಿಯನ್ನು ಆಸ್ತಿ ಎಂದು ಕರೆಯುತ್ತಾರೆ. ಕೆಲವರು ಅದನ್ನು ಹಣಕಾಸಿನ ಉತ್ಪನ್ನ ಎಂದು ಕರೆಯುತ್ತಾರೆ. ಆದರೆ, ಪ್ರತಿ ಆಸ್ತಿ ಅಥವಾ ಹಣಕಾಸಿನ ಉತ್ಪನ್ನವು ಆಧಾರವಾಗಿರುವ ಮೌಲ್ಯವನ್ನು ಹೊಂದಿರಬೇಕು. ಆದರೆ, ಕ್ರಿಪ್ಟೋಕರೆನ್ಸಿಯು ಯಾವುದೇ ಆಧಾರವಾಗಿರುವ ಮೌಲ್ಯವನ್ನು ಹೊಂದಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಬೆಲೆಯು ಊಹಾಪೋಹದ ಮೇಲೆ ಆಧಾರಿತವಾಗಿದೆ ಮತ್ತು ಜೂಜಿನಂತೆಯೇ ಇದೆ. ನಮ್ಮ ದೇಶದಲ್ಲಿ, ನಾವು ಜೂಜಾಟವನ್ನು ಅನುಮತಿಸುವುದಿಲ್ಲ. ನೀವು ಜೂಜಾಟವನ್ನು ಅನುಮತಿಸಲು ಬಯಸಿದರೆ, ಅದನ್ನು ಜೂಜಾಟವೆಂದು ಪರಿಗಣಿಸಿ ಮತ್ತು ನಿಯಮಗಳನ್ನು ರೂಪಿಸಿ. ಕ್ರಿಪ್ಟೋ ಆರ್ಥಿಕ ಉತ್ಪನ್ನವಲ್ಲ ಮತ್ತು ಅದೊಂದು ಕೇವಲ ಜೂಜು ಎಂದಿದ್ದಾರೆ.