ಕೈ-ಕಮಲ ಪೈಪೋಟಿ, ಎಎಪಿಯಿಂದ ಖಾತೆ ತೆರೆಯುವ ಯತ್ನ
ನವದೆಹಲಿ ಅಕ್ಬರ್ 18: ದೇಶದಲ್ಲಿ ಕುತೂಹಲ ಮೂಡಿಸಿರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್ 12 ರಂದು ನಡೆಯಲಿದೆ. ಡಿಸೆಂಬರ್ 8ರಂದು ಹೊರಬರಲಿದೆ. 68 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಹಣಾಹಣಿ ಎಂದು ಹೇಳಲಾಗುತ್ತಿದೆ.
ಈಗ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. 1985 ರಿಂದ ವಿಧಾನಸಭೆಯ ಅವಧಿಗೊಮ್ಮೆ (5 ವರ್ಷ) ಪಕ್ಷಗಳು ಬದಲಾಗುತ್ತಲೇ ಬಂದಿವೆ. ಒಂದು ಸಾರಿ ಬಿಜೆಪಿ ಅಧಿಕಾರ ಗದ್ದುಗೆ ಏರಿದರೆ, ಇನ್ನೊಂದು ಸಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಸಂಪ್ರದಾಯವನ್ನು ಮುರಿಯುತ್ತೇವೆಂದು ಬಿಜೆಪಿ ಹೇಳುತ್ತಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಉಚಿತ ಕೊಡುಗೆಗಳ ಭರವಸೆಯನ್ನು ನೀಡಿದೆ. ಜೈರಾಮ್ ಠಾಕೂರ್ ಸರ್ಕಾರದ ಅಧಿಕಾರಿ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಪ್ರಧಾನಿ ಮೋದಿ ಜನಪ್ರಿಯತೆಯನ್ನು ನೆಚ್ಚಿಕೊಂಡಿರುವ ಬಿಜೆಪಿ
ಹಿಮಾಚಲ ಪ್ರದೇಶದಲ್ಲಿ ಮೇಲ್ನೋಟಕ್ಕೆ ಅಧಿಕಾರ ವಿರೋಧಿ ಅಲೆ ಇದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಆಡಳಿತ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸಲಿವೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಮಾತ್ರ ತನ್ನ ಹಳೆಯ ತಂತ್ರವನ್ನು ಬಳಸಿಕೊಳ್ಳಲು ಮುಂದಾಗಿದೆ. ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಉದ್ಘಾಟನೆ, ಐಐಐಟಿಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಭಾರಿಯೂ ಅಧಿಕಾರ ಹಿಡಿಯಲು ಬಿಜೆಪಿ ಸಜ್ಜಾಗಿದೆ ಎಂದು ಹೇಳಿದ್ದಾರೆ. ಶೇ 27ರಷ್ಟು ಇರುವ ಪರಿಶಿಷ್ಟ ವರ್ಗಗಳ ಮತಗಳನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ.
ಹಿಮಾಚಲದಲ್ಲಿ ನಡೆಯಲಿದೆಯಾ ಪ್ರಿಯಾಂಕಾ ಮೋಡಿ?
ಭಾರತ್ ಜೋಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್ ಪ್ರಮುಖ ನಾಯಕರೂ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಕಾಂಗ್ರೆಸ್ ಪ್ರಚಾರವನ್ನೇ ಮಾಡುತ್ತಿಲ್ಲ. ಹೀಗಾಗಿ, ನಮಗೆ ಜಯಸಾಧಿಸುವುದು ಸುಲಭವಾಗಲಿದೆ ಎಂದು ಬಿಜೆಪಿ ಹೇಳಿದೆ. ಆದರೆ, ಕಾಂಗ್ರೆಸ್ ಮಾತ್ರ ಕೆಲ ತಿಂಗಳ ಹಿಂದೆಯೇ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಅಧಿಕಾರ ವಿರೋಧಿ ಅಲೆಯನ್ನು ಬಳಸಿಕೊಳ್ಳುತ್ತಿದೆ. ಅಧಿಕಾರಕ್ಕೆ ಬಂದರೆ, ಉಚಿತ ಕೊಡುಗೆ ನೀಡುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಹಿಮಾಚಲದಲ್ಲಿ 63,000 ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಬಿಜೆಪಿ ಸರ್ಕಾರವು ಉದ್ಯೋಗವನ್ನೇ ಒದಗಿಸಲಿಲ್ಲ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರ ಹಿಡಿದರೆ, 5 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಹಿಮಾಚಲದಲ್ಲಿ ನೆಲೆ ಕಂಡುಕೊಳ್ಳಲಿದೆಯಾ ಎಎಪಿ?
ದೆಹಲಿ, ಪಂಜಾಬ್, ಗೋವಾದಲ್ಲಿ ಈಗಾಗಲೇ ನೆಲೆಕೊಂಡಿರುವ ಎಎಪಿ, ಹಿಮಾಚಲ ಪ್ರದೇಶದಲ್ಲಿಯೂ ಮೋಡಿ ಮಾಡುವ ಭರವಸೆ ಹೊಂದಿದೆ. ಎಎಪಿ ನಾಯಕರಾದ ಅರವಿಂದ ಕೇಜ್ರಿವಾಲ್, ಮನಿಶ್ ಸಿಸೋಡಿಯಾ, ಭಗವಂತ್ ಮಾನ್ ಅವರು ಹಿಮಾಚಲಕ್ಕೆ ಭೇಟಿ ನೀಡಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಉದ್ಯೋಗ ಭರವಸೆ, ಉಚಿತ ವಿದ್ಯುತ್, ಉತ್ತಮ ಶಿಕ್ಷಣದ ಬಗ್ಗೆ ಎಎಪಿ ನಾಯಕರು ಭರವಸೆ ನೀಡಿದ್ದಾರೆ. ಆದರೆ, ಹಿಮಾಚಲ ಪ್ರದೇಶದಲ್ಲಿ ನೇರ ಪೈಪೋಟಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಎಂದು ಸಮೀಕ್ಷೆಗಳು ತಿಳಿಸಿವೆ. ತಮ್ಮ ಪಕ್ಷಕ್ಕೆ ಕೆಲ ಸ್ಥಾನಗಳು ಸಿಗಬಹುದೆಂದು ಎಎಪಿ ನಾಯಕರು ಊಹಿಸಿದ್ದಾರೆ.