ಕಾಂಗ್ರೆಸ್ ಪಟ್ಟಿ: ಕಾಪು ವಿಧಾನಸಭಾ ಕ್ಷೇತ್ರದಿಂದ ವಿನಯ್ ಕುಮಾರ್ ಸೊರಕೆ ಸ್ಪರ್ಧೆ
ಬೆಂಗಳೂರು, ಮಾರ್ಚ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿದ್ದು, ಶನಿವಾರ ಕಾಂಗ್ರೆಸ್ಸಿನ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಕೆಪಿಸಿಸಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ಸ್ಪರ್ಧಿಸಿದ್ದ ನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಕಾಪು ವಿಧಾನಸಭಾ ಕ್ಷೇತ್ರದಿಂದ ವಿನಯ್ ಕುಮಾರ್ ಸೊರಕೆ ಅವರಿಗೆ ಕರ್ನಾಟಕ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಈ ಬಾರಿ ಬದಲಾವಣೆ ಆಗಲಿದೆ ಎಂಬ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನ ಅನುಭವಿ ನಾಯಕರನ್ನು ಚುನಾವಣಾ ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಮಾಡಿದ್ದು, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಗೆ ಸ್ಪರ್ಧೆಗೆ ಅವಕಾಶ ನೀಡಿದೆ.
ವಿನಯ್ ಕುಮಾರ್ ಸೊರಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1985 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು. ಬಳಿಕ 2013ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಕೆಲಕಾಲ ಸಚಿವರಾಗಿದ್ದರು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ 63,976 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಲಾಲಾಜಿ ಮಂಡನ್ ವಿರುದ್ಧ ಸೋಲು ಅನುಭವಿಸಿದರು. ಸೋಲಿನ ಬಳಿಕ ತೆರೆ ಮರೆಗೆ ಸರಿಯದ ವಿನಯ್ ಕುಮಾರ್ ಸೊರಕೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಸಂಪರ್ಕದಲ್ಲಿ ಇರುವ ಮೂಲಕ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಬಿಜೆಪಿ ಜೊತೆಗೆ ಎಸ್‍ಡಿಪಿಐ ಕೂಡಾ ಬಲವಾಗಿ ಬೇರೂರಿದೆ. ಕಾಪು ಪುರಸಭೆಯಲ್ಲಿ ಮೂವರು ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು, ಬೆಳಪು ಪಂಚಾಯಿತಿಯಲ್ಲಿ ಇಬ್ಬರು, ಉಚ್ಚಿಲದಲ್ಲಿ ನಾಲ್ವರು ಎಸ್‌ಡಿಪಿಐ ಬೆಂಬಲಿತರು ಆಯ್ಕೆಯಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರ ರೂಪಿಸುತ್ತಿದ್ದಾರೆ.
ವಿನಯ್ ಕುಮಾರ್ ಸೊರಕೆ ಗೆಲುವಿನ ಲೆಕ್ಕಾಚಾರ
ಇದರ ಪರಿಣಾಮ ನೇರವಾಗಿ ಕಾಂಗ್ರೆಸ್ ಮೇಲೆ ಬೀಳುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಾಲಿಗಿದ್ದ ಅಲ್ಪ ಸಂಖ್ಯಾತ ಮತಗಳು ಎಸ್‌ಡಿಪಿಐ ಪಾಲಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈಗಾಗಲೇ ಕ್ಷೇತ್ರದಲ್ಲಿ ಬಲಿಷ್ಠವಾಗಿರುವ ಬಿಜೆಪಿ ಹಾಗೂ ಎಸ್‍ಡಿಪಿಐ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಗೆಲುವು ಸುಲಭವಾಗಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಈ ಬಾರಿ ಬದಲಾವಣೆ ಎನ್ನುವ ಅಂಶಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಾಯವಾಗುವ ನಿರೀಕ್ಷೆ ಇದೆ.
2018 ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಲಾಲಾಜಿ ಮಂಡನ್ ಕಣಕ್ಕಳಿದಿದ್ದು, 75,893 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ವಿನಯ್ ಕುಮಾರ್ ಸೊರಕೆ 63,976 ಮತಗಳನ್ನು ಪಡೆದು 11,917 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಆದರೆ ವಿನಯ್ ಕುಮಾರ್ ಸೊರಕೆ ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ.