ಕಲಾವಿದರ ಸಂಘದಲ್ಲಿ .ವಿಷ್ಣು ಹೆಸರು ಹಾಕದೆ ಅಗೌರವ ; ನಟ ಅನಿರುಧ್ ಬೇಸರ
ಬೆಂಗಳೂರು: ಕಲಾವಿದರ ಸಂಘದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಹಾಕದೆ ಅಗೌರವ ನೀಡಲಾಗಿದೆ ಎಂದು ವಿಡಿಯೋ ಮೂಲಕ ನಟ ಅನಿರುಧ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಡಾ.ರಾಜ್ಕುಮಾರ್ ಭವನ, ಅಂಬರೀಷ್ ಆಡಿಟೋರಿಯಂ ಇದೆ. ಈ ಎರಡೂ ಹೆಸರನ್ನು ನೋಡಿದಾಗ ನನಗೆ ತುಂಬಾ ಸಂತೋಷ ಆಯ್ತು. ಈ ಬಗ್ಗೆ ನನಗೆ ಗೌರವ ಇದೆ. ಆದರೆ ವಿಷ್ಣು ಅಪ್ಪಾಜಿಗೂ ಅಲ್ಲಿ ಸ್ಥಾನ ನೀಡಿದ್ದರೆ ಚೆನ್ನಾಗಿರುತ್ತಿತ್ತು. ನಾನು ಈ ಬಗ್ಗೆ ಕಲಾವಿದರಿಗೆ ಕೇಳಲೇ ಎಂದು ಭಾರತಿ ಅಮ್ಮನಿಗೆ ಕೇಳಿದೆ. ಅವರು ಬೇಡ ಅಂದರು. ನಾನು ಸುಮ್ಮನಿದ್ದೆ. ಇತ್ತೀಚಿಗೆ ಅಭಿಮಾನಿಗಳು ಕರೆ ಮಾಡಿ ವಿಷ್ಣು ಸರ್ ಹೆಸರೇಕಿಲ್ಲ? ಎಂದು ಕೇಳುತ್ತಿದ್ದಾರೆ. ಹಾಗಾಗಿ ಈ ವಿಚಾರವನ್ನ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ನಮಗೆ ಕೇಳಲು ಬೇಸರವಾಗುತ್ತೆ, ಆದರೂ ಅಭಿಮಾನಿಗಳ ಒತ್ತಾಯ ಹೆಚ್ಚಾಗಿದ್ದರಿಂದ ಕೇಳುತ್ತಿದ್ದೇನೆ. ಅಪ್ಪಾಜಿಗೆ ಸಿಗಬೇಕಾದ ಗೌರವ ಸಿಗಬೇಕು ಎಂದು ನಾನು ಒಬ್ಬ ಕಲಾವಿದನಾಗಿ, ಕುಟುಂಬದ ಸದಸ್ಯನಾಗಿ ಅನ್ನಿಸುತ್ತೆ ಅಪ್ಪಾಜಿಗೆ ಸಿಗಬೇಕಾದ ಗೌರವ ಸಿಗಲೇಬೇಕು ಎಂದು ಅನಿರುಧ್ ಆಗ್ರಹಿಸಿದ್ದಾರೆ.
ನಾನು ಈ ಹಿಂದೆ ಕೂಡ ವಾಣಿಜ್ಯ ಮಂಡಳಿ ಬಳಿ ಅಪ್ಪಾಜಿ ಪುತ್ಥಳಿ ಇಡಬೇಕು ಎಂದು ಕೇಳಿದೆ. ಆಗ ಒಂದು ಮಾತು ಬಂತು, ಇವತ್ತು ಇವರ ಪುತ್ಥಳಿ, ನಾಳೆ ಇನ್ನೊಬ್ಬರ ಪುತ್ಥಳಿ ಇಡಬೇಕು ಅಂತ ಬರುತ್ತೆ. ಪ್ರತಿಯೊಬ್ಬರ ಪುತ್ಥಳಿ ಇಡೋಕೆ ಜಾಗ ಇಲ್ಲ ಅಂದ್ರು. ಡಾ.ರಾಜ್ಕುಮಾರ್ ಅವರಿಗೆ ಸಲ್ಲಬೇಕಾದ ಎಲ್ಲ ಗೌರವವೂ ಸಲ್ಲಲೇಬೇಕು. ಆದ್ರೆ ಅಪ್ಪಾಜಿಗೂ ಸಲ್ಲಬೇಕಲ್ವಾ? ಪುತ್ಥಳಿ ನಿರ್ಮಾಣಕ್ಕೆ ಸಹಿ ಸಂಗ್ರಹ ಆಗಬೇಕು ಅಂದ್ರು. ಅದಕ್ಕೂ ಒಪ್ಪಿ ನಾನು ರಾಜ್ಯಾದ್ಯಂತ ಸಹಿ ಸಂಗ್ರಹಿ ಸಲ್ಲಿಸಿದೆ, ಆದರೂ ಪುತ್ಥಳಿ ನಿರ್ಮಾಣ ಆಗಲಿಲ್ಲ ಎಂದು ನೋವಿನಿಂದಲೇ ಅನಿರುಧ್ ಹೇಳಿದ್ದಾರೆ.