ಐಷಾರಾಮಿ ಕಾರು ಚಲಾಯಿಸುತ್ತಿದ್ದ 24ರ ಯುವತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೂ ಹಿಂತಿರುಗಿ ನೋಡದೇ ಹೋದಳು!
ನವದೆಹಲಿ: ಪೂರ್ವ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಮರ್ಸಿಡಿಸ್ ಕಾರಿನಿಂದ ಇನ್ನೊಬ್ಬ ಮಹಿಳೆಗೆ ಡಿಕ್ಕಿ ಹೊಡೆದ ಆರೋಪದ ಮೇಲೆ 24 ವರ್ಷದ ಮಹಿಳೆಯನ್ನು ಇಂದು (ಗುರುವಾರ) ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಯೋಜನಾ ವಿಹಾರ್ ನಿವಾಸಿ ನೂಪುರ್ ಗುಪ್ತಾ ಎಂದು ಗುರುತಿಸಲಾಗಿದೆ.
ಭಾನುವಾರ ಮಧ್ಯಾಹ್ನ 3.45 ರ ಸುಮಾರಿಗೆ ನೂಪುರ್ ಗುಪ್ತಾ ಚಲಾಯಿಸುತ್ತಿದ್ದ ಮರ್ಸಿಡಿಸ್, ಕಾರು 27 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದಿದೆ.
ಝಿಲ್ಮಿಲ್ ನಿವಾಸಿ ಅಕ್ಷಿತಾ ಅಗರ್ವಾಲ್ ತನ್ನ ತಂಗಿಯೊಂದಿಗೆ ರಿಷಬ್ ವಿಹಾರದ ಗೇಟ್ ಸಂಖ್ಯೆ 4ರ ಮುಂದೆ ನಿಂತಿದ್ದಾಗ ಈ ಘಟನೆ ನಡೆದಿದೆ. ವಿವೇಕ್ ವಿಹಾರ್ ಕಡೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಮರ್ಸಿಡಿಸ್ ಕಾರು ಆಕೆಗೆ ಡಿಕ್ಕಿ ಹೊಡೆದಿದ್ದು, ಸಂತ್ರಸ್ತೆಯ ಕಾಲು ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗರ್ವಾಲ್ ಅವರನ್ನು ಪರೀಕ್ಷಿಸಲು ನಿಲ್ಲಿಸದ ಚಾಲಕಿಯ ವಿರುದ್ಧ ಐಪಿಸಿಯ ಸೆಕ್ಷನ್ 279 (ರಾಶ್ ಡ್ರೈವಿಂಗ್) ಮತ್ತು 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಾರನ್ನು ಗುರುತಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸಿಸ್)