ಕಿಡ್ನಿ ಮಾರಿ ದುಡ್ಡು ಕೊಡ್ತೀನಿ, ವೈ.ಸಿ.ಸಿದ್ದರಾಮಯ್ಯಗೆ ಕೈ ಟಿಕೆಟ್ ನೀಡಿ: ಯುವಕನ ಹುಚ್ಚಾಟ!

ತುಮಕೂರು: `ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ನಾಯಕರ ಪ್ರಚಾರ ಭರಾಟೆ ಜೋರಾಗಿ ನಡೆಯುತ್ತಿದೆ. ಈ ನಡುವೆಯೇ ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪ ಶುರುವಾಗಿದೆ. ಇದೀಗ ಇಲ್ಲೊಂದು ಜಿಲ್ಲೆಯಲ್ಲಿ ಯುವಕನೊಬ್ಬ ಟಿಕೆಟ್ ನೀಡಬೇಕೆಂದು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾನೆ.
ಹೌದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಸಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಎಂದು ಹುಚ್ವಾಟ ಮೆರೆದಿದ್ದಾನೆ.ಕೆಂಕೆರೆ ಗ್ರಾಮದ ಪ್ರಭುಕುಮಾರ್ ಎಂಬಾತ ನನ್ನ ಕಿಡ್ನಿ ಮಾರಿ ಚುನಾವಣಾ ಖರ್ಚು ಹೊಂದಿಸುತ್ತೇನೆ ನಮ್ಮ ನಾಯಕರಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ.ಈತನ ಹೇಳಿಕೆಗೆ ತುಮಕೂರು ಜಿಲ್ಲೆಯಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಈ ನಡುವೆಯೇ ಪರ-ವಿರೋಧ ಚರ್ಚೆಗಳಿಗೂ ಕಾರಣವಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಯಾಗಿರುವ ವೈ.ಸಿ ಸಿದ್ದರಾಮಯ್ಯ ಈ ಬಾರಿ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.ಹೀಗಾಗಿ ಕೆಂಕೆರೆ ಗ್ರಾಮದ ಪ್ರಭುಕುಮಾರ್ ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ.
ಈ ವೇಳೆ ಚುನಾವಣೆಗೆ ನಿಲ್ಲಲು ಸಿದ್ದರಾಮಯ್ಯ ಸಾಕಷ್ಟು ಸಹಾಯ ಮಾಡಿದ್ದರು ಎಂಬುದಾಗಿಯೂ ಯುವಕ ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದಾನೆ.ಈಗಾಗಲೇ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ 7 ಮಂದಿ ಕಾಂಗ್ರೆಸ್ ಪಕ್ಷದ ಟಿಕೆಟ್ ರೇಸ್‌ನಲ್ಲಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮುಖಂಡರು ಪಟ್ಟು ಹಿಡಿದಿರೋದು ಹೈಕಮಾಂಡ್ ಅಂಗಳಕ್ಕೂ ತಲುಪಿದೆ.