ಎಬಿಡಿ ಬಗ್ಗೆ ನಾಲಿಗೆ ಹರಿಬಿಟ್ಟ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳ ಆಕ್ರೋಶ

ಎಬಿಡಿ ಬಗ್ಗೆ ನಾಲಿಗೆ ಹರಿಬಿಟ್ಟ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳ ಆಕ್ರೋಶ

ಗೌತಮ್ ಗಂಭೀರ್ ಮತ್ತೊಮ್ಮೆ ಆರ್​​ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ. ಮಿಸ್ಟರ್ 360 ಆಟಗಾರ ಎಬಿ ಡಿವಿಲಿಯರ್ಸ್ ಬಗ್ಗೆ ಗಂಭೀರ್ ನಾಲಿಗೆ ಹರಿಬಿಟ್ಟಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಯಾರು ಬೇಕಾದರೂ ರನ್ ಗಳಿಸಬಹುದು ಎನ್ನುವ ಮೂಲಕ ಡಿವಿಲಿಯರ್ಸ್ ದಾಖಲೆಗಳನ್ನು ಪ್ರಶ್ನಿಸಿದ್ದಾರೆ.

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಫ್ರಾಂಚೈಸಿಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಎಬಿ ಡಿವಿಲಿಯರ್ಸ್ ಬಿಡಿಸಲಾರದ ನಂಟು ಹೊಂದಿದ್ದಾರೆ. ಎಬಿಡಿ ಬಗ್ಗೆ ಆರ್ ಸಿಬಿ ಅಭಿಮಾನಿಗಳು ವಿಶೇಷ ಅಭಿಮಾನ ಹೊಂದಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಗೌತಮ್ ಗಂಭೀರ್ ಎಬಿ ಡಿವಿಲಿಯರ್ಸ್ ಉತ್ತಮ ಬ್ಯಾಟರ್ ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಗಂಭೀರ್ ಹೇಳಿರುವ ಪ್ರಕಾರ ಡಿವಿಲಿಯರ್ಸ್ ತಾವು ಆಡುವ ಅವಧಿಯಲ್ಲಿ ವೈಯಕ್ತಿಕ ದಾಖಲೆಗಳನ್ನು ಮಾತ್ರ ಹೊಂದಿದ್ದಾರೆ. ತಂಡಕ್ಕಾಗಿ ಅವರು ಆಡಿಲ್ಲ ಎನ್ನುವ ರೀತಿ ಮಾತನಾಡಿದ್ದಾರೆ.

"ಚಿನ್ನಸ್ವಾಮಿ ಕ್ರೀಡಾಂಗಣದಂತಹ ಸಣ್ಣ ಮೈದಾನದಲ್ಲಿ 8-10 ವರ್ಷಗಳ ಕಾಲ ಎಬಿ ಡಿವಿಲಿಯರ್ಸ್ ಆಡಿದರೆ, ಯಾವುದೇ ಆಟಗಾರನು ಅದೇ ಸ್ಟ್ರೈಕ್ ರೇಟ್ ಅಥವಾ ಸಾಮರ್ಥ್ಯವನ್ನು ಹೊಂದಿರಬಹುದು. ಸುರೇಶ್ ರೈನಾ 4 ಐಪಿಎಲ್ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಡಿವಿಲಿಯರ್ಸ್ ಕೇವಲ ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದಾರೆ" ಎಂದು ಗಂಭೀರ್ ಹೇಳಿದ್ದಾರೆ.

ಗೌತಮ್ ಗಂಭೀರ್ ದಾಖಲೆ ಮುಂದಿಟ್ಟ ಅಭಿಮಾನಿಗಳು

ಎಬಿಡಿ ಬಗ್ಗೆ ಗಂಭೀರ್ ನೀಡಿದ ಹೇಳಿಕೆ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಗಂಭೀರ್ ಗಳಿಸಿದ ರನ್‌ಗಳ ದಾಖಲೆಯನ್ನು ಮುಂದಿಟ್ಟು ಪ್ರಶ್ನೆ ಮಾಡಿದ್ದಾರೆ.

"ಗೌತಮ್ ಗಂಭೀರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಇನ್ನಿಂಗ್ಸ್‌ ಆಡಿದ್ದು, 126.4 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಚಿಕ್ಕ ಅಂಗಳದಲ್ಲಿ ಕೇವಲ 2 ಅರ್ಧಶತಕ ಮಾತ್ರ ಸಿಡಿಸಿದ್ದಾರೆ. 64 ಅವರ ಗರಿಷ್ಟ ಸ್ಕೋರ್ ಆಗಿದೆ. ಕ್ರೀಡಾಂಗಣದ ಚಿಕ್ಕದಾದರೂ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ" ಎಂದು ಅಭಿಮಾನಿಯೊಬ್ಬರು ಟೀಕಿಸಿದ್ದಾರೆ.

ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, "ಆಟಗಾರನಾಗಿ ನಿಮ್ಮನ್ನು ಮೆಚ್ಚಿಕೊಂಡಿದ್ದೇನೆ, ನಿಮ್ಮ ಮೇಲೆ ಇನ್ನೂ ಗೌರವವಿದೆ. ಆದರೆ ಅಂತಹ ಆಟಗಾರನ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ನಿಮಗೆ ಒಳ್ಳೆಯದಲ್ಲ" ಎಂದು ಹೇಳಿದ್ದಾರೆ.

2021ರ ಐಪಿಎಲ್ ಬಳಿಕ ನಿವೃತ್ತಿ

ಗೌತಮ್ ಗಂಭೀರ್ ಐಪಿಎಲ್‌ನಲ್ಲಿ 154 ಪಂದ್ಯಗಳನ್ನಾಡಿದ್ದು 4218 ರನ್ ಗಳಿಸಿದ್ದಾರೆ. 2011ರಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಂಡ ಎಬಿಡಿ 2021ರ ವರೆಗೂ ಆಡಿದರು. 157 ಪಂದ್ಯಗಳಲ್ಲಿ 158.33 ಸ್ಟ್ರೈಕ್ ರೇಟ್‌ನಲ್ಲಿ 4522 ರನ್‌ಗಳನ್ನು ಸಿಡಿಸಿದ್ದಾರೆ. ಆರ್ ಸಿಬಿ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎರಡು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.

2021ರ ಐಪಿಎಲ್ ಬಳಿಕ ಎಬಿ ಡಿವಿಲಿಯರ್ಸ್ ಐಪಿಎಲ್‌ಗೆ ನಿವೃತ್ತಿ ಘೋಷಿಸಿದರು. ಈ ಬಾರಿ ಅವರು ಆರ್ ಸಿಬಿ ತಂಡದ ಪರವಾಗಿ ಕೆಲಸ ಮಾಡಲಿದ್ದು, ಯಾವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ಇನ್ನೂ ತಿಳಿದುಬಂದಿಲ್ಲ.