ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವು ನಿಣರ್ಯ ತೆಗೆದುಕೊಳ್ಳುತ್ತೇವೆ : ಸಿಎಂ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವು ನಿಣರ್ಯ ತೆಗೆದುಕೊಳ್ಳುತ್ತೇವೆ : ಸಿಎಂ

ಬೆಳಗಾವಿ,ಡಿ.13-ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ಕೆಲವು ನಿಣರ್ಯಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಸಿದ್ದವಿದ್ದು, ಹಲವು ಯೋಜನೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇನೆ. ಸದನದ ಮೂಲಕ ಈ ಭಾಗದ ಜನರು ನಿರೀಕ್ಷೆ ಮಾಡಬಹುದು ಎಂದರು.

ಅಧಿವೇಶನದಲ್ಲಿ ಸರ್ಕಾರ ಕೆಲವು ವಿಧೇಯಕಗಳನ್ನು ಮಂಡಿಸಲಿದೆ. ಹಾಗೆಯೇ ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಲು ಸಿದ್ದವಿದೆ ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸದನದಲ್ಲಿ ಮಂಡಿಸಲಾಗುವುದು. ಲವ್ ಜಿಹಾದ್ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಾಯ್ದೆಗಳ ಪರಿಶೀಲನಾ ಸಮಿತಿ ಮುಂದೆ ಯಾವ ಯಾವ ಕಾಯ್ದೆಗಳು ಬರುತ್ತವೋ ನೋಡೋಣ. ಆನಂತರ ಸದನದಲ್ಲಿ ಅವುಗಳನ್ನು ಮಂಡಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎನ್ನುವ ಮೂಲಕ ಲವ್ ಜಿಹಾದ್ ವಿರುದ್ಧದ ಮಸೂದೆ ಮಂಡನೆ ಬಗ್ಗೆ ಸುಳಿವು ನೀಡಿದರು.

ಪ್ರತಿಭಟಿಸುತ್ತಿರುವ ರೈತರ ಜೊತೆ ಚರ್ಚೆ ಮಾಡಲಾಗುವುದು. ರೈತರ ವಿರೋಧ ವ್ಯಕ್ತವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ, ರೈತರು ಯಾವ ವಿಚಾರವನ್ನು ಪ್ರಸ್ತಾಪಿಸುತ್ತಾರೋ ಕಾದುನೋಡಿ ಆನಂತರ ತೀರ್ಮಾನ ಮಾಡುವುದಾಗಿ ಹೇಳಿದರು.