ಈತನ ಆಕ್ರಮಣಕಾರಿ ನಾಯಕತ್ವದಿಂದ ಏಕದಿನ ಕ್ರಿಕೆಟ್‌ನಲ್ಲಿ ಆಸಕ್ತಿ ಮರಳುತ್ತಿದೆ; ಅಜಯ್ ಜಡೇಜಾ

ಈತನ ಆಕ್ರಮಣಕಾರಿ ನಾಯಕತ್ವದಿಂದ ಏಕದಿನ ಕ್ರಿಕೆಟ್‌ನಲ್ಲಿ ಆಸಕ್ತಿ ಮರಳುತ್ತಿದೆ; ಅಜಯ್ ಜಡೇಜಾ

ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್ ಅತ್ಯಂತ ಕುತೂಹಲ ಮೂಡಿಸುವ ಸ್ವರೂಪವಾಗಿತ್ತು. ಏಕೆಂದರೆ, ಆಗ ಟೆಸ್ಟ್ ಬಿಟ್ಟರೆ ಏಕದಿನ ಕ್ರಿಕೆಟ್ ಮಾದರಿಗಳು ಮಾತ್ರ ಇದ್ದವು. ಯಾವಾಗ ಟಿ20 ಮಾದರಿಯ ಆಟ ಕಾಲಿಟ್ಟಿತೋ, ಅಂದಿನಿಂದ ದೀರ್ಘ ಸ್ವರೂಪದ ಪಂದ್ಯಗಳು ಆಸಕ್ತಿ ಕಳೆದುಕೊಂಡವು.

ಟಿ20 ಕ್ರಿಕೆಟ್‌ನಂತಹ ಚುಟುಕು ಪಂದ್ಯಗಳ ಆಗಮನದೊಂದಿಗೆ ಟೆಸ್ಟ್, ಏಕದಿನದಂತಹ ದೀರ್ಘ ಸ್ವರೂಪದ ಆಟಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಆಸಕ್ತದಾಯಕವಾಗಿದ್ದರೂ, 50 ಓವರ್‌ಗಳ ಸ್ವರೂಪವು ತನ್ನಷ್ಟಕ್ಕೆ ತಾನೇ ಅಪಾಯ ತಂದೊಡ್ಡಿಕೊಂಡಿದೆ.

ಏಕದಿನ ಕ್ರಿಕೆಟ್ ಸ್ವರೂಪದ ಭವಿಷ್ಯದ ಬಗ್ಗೆ ವಿಶ್ವದೆಲ್ಲೆಡೆ ನಡೆಯುತ್ತಿರುವ ಚರ್ಚೆಗಳ ಮಧ್ಯೆ, ಭಾರತದ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರಂತಹ ಆಕ್ರಮಣಕಾರಿ ನಾಯಕತ್ವದ ಶೈಲಿಯು ಅಭಿಮಾನಿಗಳಲ್ಲಿ ಮತ್ತೆ ಏಕದಿನ ಕ್ರಿಕೆಟ್‌ನಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಗಮನಾರ್ಹ ಅಂಶವೆಂದರೆ, ಶುಕ್ರವಾರ ಮಾರ್ಚ್ 17ರಂದು ಮುಂಬೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾರತವನ್ನು ಮುನ್ನಡೆಸಿದರು ಮತ್ತು ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ಬೀಗಿದರು.

"ಹಾರ್ದಿಕ್ ಪಾಂಡ್ಯ ಆಡುವುದನ್ನು ನೀವು ನೋಡಿದಾಗಲೆಲ್ಲಾ ಅವರು ವಿಭಿನ್ನ ರೀತಿಯಲ್ಲಿ ಆಡುತ್ತಾರೆ. ಕೇವಲ ಆಡುವುದಲ್ಲದೇ, ಮಧ್ಯಾಹ್ನದ ಉರಿಬಿಸಿಲಿನಲ್ಲಿ ಅವರ ಉತ್ಸಾಹ ಕುಗ್ಗಿರುವುದಿಲ್ಲ. ಹಾರ್ದಿಕ್ ಪಾಂಡ್ಯ ಯಾವಾಗಲೂ ಆಕ್ರಮಣಕಾರಿ ಆಟಗಾರನಾಗಿದ್ದಾರೆ," ಎಂದು ಅಜಯ್ ಜಡೇಜಾ ಹೇಳಿದ್ದಾರೆ.

"ಭಾರತ ತಂಡದ ಆಡುವ ಹನ್ನೊಂದರ ಬಳಗ ನೋಡಿದರೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅವರು ರನ್ ಹೊಡೆಸಿಕೊಳ್ಳಲಿ, ಬಿಡಲಿ ಮೈದಾನದಲ್ಲಿ ಅವರ ಚಲನೆ ವೇಗವಾಗಿರುತ್ತದೆ. ಅದೇ ರೀತಿ ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ತಿಳಿಸಿದರು.

"ಇನ್ನು ರವೀಂದ್ರ ಜಡೇಜಾ ರಕ್ಷಣಾತ್ಮಕ ಬೌಲರ್ ಆಗಿದ್ದರೂ, ಅವರು ರಕ್ಷಣಾತ್ಮಕವಾಗಿ ಆಡುವುದಿಲ್ಲ. ಅವರ ಮನಸ್ಥಿತಿ ಆಕ್ರಮಣಕಾರಿಯದ್ದಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಶೈಲಿ ಪಂದ್ಯವನ್ನು ನಿರಾಸೆ ಮೂಡಿಸುವುದಿಲ್ಲ. ಪ್ರತಿಯೊಬ್ಬ ನಾಯಕರೂ ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ, ಕೆಲವರು ಆಗುವುದಿಲ್ಲ," ಎಂದು ಅಜಯ್ ಜಡೇಜಾ ಅವರು ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.

"ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನೋಡಿದರೆ, ಅವರು ಪಂದ್ಯವನ್ನು ಕೊನೆಯವರೆಗೂ ಎಳೆದುಕೊಂಡು ಹೋಗಿ ಮುಗಿಸುತ್ತಾರೆ. ಅದು ಆತನ ಆಟದ ಶೈಲಿಯಾಗಿದೆ. ಅದೇ ರೀತಿ ಭಾರತದ ಎಂಎಸ್ ಧೋನಿ ಕೂಡ ಒಂದು ಶೈಲಿಯನ್ನು ಹೊಂದಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಅವರದ್ದು ಆಕ್ರಮಣಕಾರಿ ಶೈಲಿಯ ಆಟವಾಗಿದೆ. ಇದು ನಿಮಗೆ ಬೇಸರ ತರುವುದಿಲ್ಲ. ಇದು ಏಕದಿನ ಕ್ರಿಕೆಟ್‌ನಲ್ಲಿ ನಿಮಗೆ ಆಸಕ್ತಿಯನ್ನು ಮರಳಿ ತರುತ್ತದೆ," ಎಂದು ಅಜಯ್ ಜಡೇಜಾ ಅಭಿಪ್ರಾಯಪಟ್ಟರು.

ತಮ್ಮ ಭಾವ ಕುನಾಲ್ ಸಜ್ದೇಹ್ ಅವರ ಮದುವೆಗಾಗಿ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಖಾಯಂ ನಾಯಕ ರೋಹಿತ್ ಶರ್ಮಾ ಅವರು 2 ಮತ್ತು 3ನೇ ಪಂದ್ಯಗಳಿಗಾಗಿ ಮರಳಲಿದ್ದಾರೆ. ಹೀಗಾಗಿ ಭಾರತ ತಂಡದ ಅಗ್ರ ಕ್ರಮಾಂಕ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ನಾಯಕ ರೋಹಿತ್ ಶರ್ಮಾ ಮರಳಿರುವುದರಿಂದ ಮತ್ತೊಬ್ಬ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.