ಈಗ ಆಹಾರ ಕೊರತೆ: ಟರ್ಕಿ, ಸಿರಿಯಾದಲ್ಲಿ ರಕ್ಷಣೆ ಜತೆಗೆ ಹೊಸ ಸವಾಲು

ಈಗ ಆಹಾರ ಕೊರತೆ: ಟರ್ಕಿ, ಸಿರಿಯಾದಲ್ಲಿ ರಕ್ಷಣೆ ಜತೆಗೆ ಹೊಸ ಸವಾಲು

ಅಂಕಾರ: ನಿಲ್ಲದ ಆಕ್ರಂದನ, ಸಹಾಯಕ್ಕಾಗಿ ಕಂಡ ಕಂಡವರಲ್ಲಿ ಮೊರೆ… ಇದರ ಜತೆಗೆ ಆಹಾರದ ಕೊರತೆ.

ಇದು ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಸಂತ್ರಸ್ತರಾಗಿರುವ ಕನಿಷ್ಠ 8.70 ಲಕ್ಷ ಮಂದಿಗೆ ತುರ್ತಾಗಿ ಆಹಾರ ಒದಗಿಸುವ ಪರಿಸ್ಥಿತಿ ಎದುರಾಗಿದೆ.

ಅದಕ್ಕಾಗಿ ಇನ್ನಷ್ಟು ಪರಿಹಾರ ಕೇಂದ್ರಗಳನ್ನು ತೆರೆಯಬೇಕಿದೆ.

ಸಿರಿಯಾ ಒಂದರಲ್ಲಿ 53 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಎರಡು ದೇಶಗಳಲ್ಲಿ ನಿರಾಶ್ರಿತರು ತೀವ್ರ ಚಳಿಯಿಂದ ನಡುಗುತ್ತಿದ್ದು, ಅವರಿಗೆ ಹೊದಿಕೆಗಳು ಸಹಿತ ಅಗತ್ಯ ವಸ್ತುಗಳನ್ನು ಒದಗಿಸಬೇಕಿದೆ. ಅವರಿಗಾಗಿ ಶೀಘ್ರ ಮತ್ತಷ್ಟು ತಾತ್ಕಾಲಿಕ ನಿರಾಶ್ರಿತರ ತಾಣಗಳನ್ನು ತೆರೆಯಬೇಕಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

“ಟರ್ಕಿ ವಿಪತ್ತು ನಿರ್ವಹಣ ಪಡೆಯ ಸುಮಾರು 32,000 ಸಿಬಂದಿ ಹಾಗೂ ವಿದೇಶಗಳ 8,294 ರಕ್ಷಣ ಸಿಬಂದಿ ರಕ್ಷಣ ಕಾರ್ಯದಲ್ಲಿ ತೊಡಗಿದ್ದಾರೆ,’ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಕಾರ್ಯಾಚರಣೆ: ಫೆ.6ರ ದುರಂತದ ಬಳಿಕ ಅಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಟರ್ಕಿಯ ದಕ್ಷಿಣ ಹಾತೆಯಲ್ಲಿ ಭೂಕಂಪ ಸಂಭವಿಸಿ 123 ಗಂಟೆಗಳ ಅನಂತರವೂ ಅವಶೇಷಗಳ ಎಡೆಯಲ್ಲಿ ಬದುಕಿದ್ದ 2 ವರ್ಷದ ಬಾಲಕಿಯನ್ನು ರಕ್ಷಣ ತಂಡದ ಸಿಬಂದಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ, ಕಹ್ರಾಮನ್ಮಾರಾಸ್‌ ನಗರದಲ್ಲಿ 70 ವರ್ಷದ ವೃದ್ಧೆಯನ್ನು ಅವಶೇಷಗಳ ಅಡಿಯಿಂದ ಹೊರಕ್ಕೆ ತರಲಾಗಿದೆ. ಮತ್ತೂಂದೆಡೆ 10 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ರಕ್ಷಣ ತಂಡ ಅಪಾಯದಿಂದ ಪಾರು ಮಾಡಿದೆ.

ಪಾರಾದರೂ ಸಾವು: ಟರ್ಕಿಯ ಕಿರಿಕಾನ್‌ ಎಂಬಲ್ಲಿ ಅವಶೇಷಗಳ ಎಡೆಯಲ್ಲಿ 104 ಗಂಟೆಗಳ ಕಾಲ ಸಿಕ್ಕಿ ಹಾಕಿದ್ದ 40 ವರ್ಷದ ಮಹಿಳೆಯನ್ನು ಪಾರು ಮಾಡಲಾಗಿತ್ತು. ದುರಂತದ ವಿಚಾರವೆಂದರೆ, ಆಕೆ ಶನಿವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಅಂಶ ಜಗತ್ತಿನಾದ್ಯಂತ ವೈರಲ್‌ ಆಗಿದೆ.

25,000 ದಾಟಿದ ಸಾವಿನ ಸಂಖ್ಯೆ: ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ ಸಾವಿನ ಸಂಖ್ಯೆ 25 ಸಾವಿರ ದಾಟಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅಂದಾಜು 12,141 ಕಟ್ಟಡಗಳು ನಾಶವಾಗಿವೆ. ಭೂಕಂಪದಿಂದಾಗಿ ಟರ್ಕಿಯ ಈಶಾನ್ಯ ಭಾಗದಿಂದ ಮೆಡಿಟರೇನಿಯನ್‌ ಸಮುದ್ರದ ವರೆಗಿನ ಭಾಗದವರೆಗೆ 300 ಕಿ.ಮೀ. ವರೆಗೆ ಬಿರುಕು ಬಿಟ್ಟಿರುವ ಬಗ್ಗೆ ಐರೋಪ್ಯ ಒಕ್ಕೂಟದ ಉಪಗ್ರಹ ಸೆಂಟಿನೆಲ್‌-1 ದೃಢಪಡಿಸಿದೆ.

ಕಾರ್ಯಚರಣೆ ಸ್ಥಗಿತ: ಟರ್ಕಿಯ ಹಾತೆಯಲ್ಲಿ ಎರಡು ಉಗ್ರ ಸಂಘಟನೆಗಳ ನಡುವಿನ ತಿಕ್ಕಾಟದಿಂದ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ 82 ಆಸ್ಟ್ರೇಲಿಯಾ ಯೋಧರು ರಕ್ಷಣ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಕುರ್ದಿಶ್‌ ಉಗ್ರರು ಮತ್ತು ಸಿರಿಯಾ ಬಂಡುಕೋರರ ವಿರುದ್ಧ ಘರ್ಷಣೆ ಏರ್ಪಟ್ಟಿದೆ. “ಮಾನವೀಯ ನೆಲೆಯಲ್ಲಿ ಸಂಘರ್ಷವನ್ನು ನಿಲ್ಲಿಸಿ, ರಕ್ಷಣ ಕಾರ್ಯಾಚರಣೆಗೆ ವಿಪತ್ತು ನಿರ್ವಹಣ ಪಡೆಗಳಿಗೆ ಅನುವು ಮಾಡಿ ಕೊಡಬೇಕು,’ ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ. ಅಂಕಾರ ಮೂಲದ ಉಗ್ರ ಸಂಘಟನೆ ಕುರ್ದಿಸ್ಥಾನ್‌ ವರ್ಕರ್ಸ್‌ ಪಾರ್ಟಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.

ಭಾರತಕ್ಕೂ ಕೂಡ ಅಪಾಯ?
ಟರ್ಕಿ ಮತ್ತು ಸಿರಿಯಾ ರೀತಿ ಭಾರತದಲ್ಲೂ ತೀವ್ರ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಐಐಟಿ ಕಾನ್ಪುರದ ಭೂವಿಜ್ಞಾನ ವಿಭಾಗದ ಹಿರಿಯ ವಿಜ್ಞಾನಿ ಪ್ರೊ| ಜಾವೆದ್‌ ಮಲಿಕ್‌ ಹೇಳಿದ್ದಾರೆ. “ಕಚ್‌, ಅಂಡಮಾನ್‌ ಮತ್ತು ನಿಕೋಬಾರ್‌, ಹಿಮಾಲಯ ಪ್ರದೇಶ, ಬಹ್ರೈಚ್‌, ಲಖೀಂಪುರ್‌, ಪಿಲಿಭಿಟ್‌, ಗಾಜಿಯಾಬಾದ್‌, ರೂರ್ಕಿ, ನೈನಿತಾಲ್‌, ಪ್ರಯಾಗ್‌ರಾಜ್‌, ಲಕ್ನೊ, ವಾರಾಣಸಿ ಮತ್ತು ಸೋನ್‌ಭದ್ರಾ ಇವು ತೀವ್ರದಿಂದ ಕಡಿಮೆ ಪ್ರಮಾಣದ ಭೂಕಂಪ ಸಾಧ್ಯತಾ ವಲಯಗಳಲ್ಲಿವೆ’ ಎಂದು ಮಲಿಕ್‌ ತಿಳಿಸಿದ್ದಾರೆ.